ಬನಹಟ್ಟಿ: ಸರ್ಕಾರ ಈ ಹಿಂದೆ ಘೋಷಣೆ ಮಾಡಿದ ಪ್ಯಾಕೇಜ್ ನಲ್ಲಿ ನೇಕಾರರಿಗೆ ಯಾವುದೆ ಸೌಲಭ್ಯಗಳು ಇರಲಿಲ್ಲ. ಆದ್ದರಿಂದ ನೇಕಾರರಿಗೂ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ತೇರದಾಳ ಮತಕ್ಷೇತ್ರ ಶಾಸಕ ಸಿದ್ದು ಸವದಿ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬುಧವಾರ ಮನವಿಯನ್ನು ಸಲ್ಲಿಸಿದರು.
ಕೋವಿಡ್ ಲಾಕ್ ಡೌನ್ ನಿಂದಾಗಿ ಕೆಎಚ್‌ಡಿಸಿ ನೇಕಾರರು, ವಿದ್ಯುತ್ ಚಾಲಿತ ಮಗ್ಗಗಳ ನೇಕಾರರು, ಸೈಜಿಂಗ್ ಕೂಲಿ ಕಾರ್ಮಿಕರು, ಬಣ್ಣದ ಕಾರ್ಖಾನೆಯಲ್ಲಿ ಮತ್ತು ನೇಕಾರರಿಗೆ ಪೂರಕವಾಗಿ ಕಾರ್ಯದಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಎಲ್ಲ ವರ್ಗದವರಿಗೆ ತಲಾ ರೂ.3000 ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ :ಕೋವಿಡ್ ಪಾಸಿಟಿವ್ ಆಗಿ ಗುಣಮುಖನಾಗಿದ್ದ ಖೈದಿ ಆಸ್ಪತ್ರೆಯಲ್ಲಿ ಸಾವು
ಲಾಕ್ ಡೌನ್ ನಿಂದಾಗಿ ನೇಕಾರಿಕೆಯನ್ನು ಅವಲಂಬಿಸಿದ ಸಾವಿರಾರು ಕುಟುಂಬಗಳು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಸವದಿ ದೂರವಾಣಿಯ ಮೂಲಕ ಪತ್ರಿಕೆಯ ಜೊತೆಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಬೆಳಗಾವಿ ಶಾಸಕ ಅಭಯಕುಮಾರ ಪಾಟೀಲ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಇದ್ದರು.