ರಾಯಚೂರು: ಕೇಂದ್ರ ಸರ್ಕಾರ ಮುಂದಿನ 18 ತಿಂಗಳಲ್ಲಿ 10 ಲಕ್ಷ ಉದ್ಯೋಗ ಭರ್ತಿಯ ಹುಸಿ ಭರವಸೆ ಹಾಗೂ ಅಗ್ನಿಪಥ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಜನೆ ಮಾಡುವ ಆಶ್ವಾಸನೆ ನೀಡಿತ್ತು. ಆದರೆ, ಈಗ ಮುಂದಿನ 18 ತಿಂಗಳಲ್ಲಿ ಕೇವಲ 10 ಲಕ್ಷ ರೂ. ಉದ್ಯೋಗ ನೀಡುತ್ತೇನೆ ಎನ್ನುತ್ತಿರುವುದು ಮುಂಬರುವ ರಾಜ್ಯಗಳ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಮಾಡಲಾಗಿದೆ. ದೇಶದಲ್ಲಿ 45 ಕೋಟಿಗೂ ಅಧಿಕ ನಿರುದ್ಯೋಗಿಗಳು ಸರ್ಕಾರದ ಮೇಲೆ ಭರವಸೆ ಕಳೆದುಕೊಂಡು ಕೆಲಸ ಹುಡುಕುವುದನ್ನೇ ಕೈ ಬಿಟ್ಟಿದ್ದಾರೆ ಎಂದು ಜರಿದರು.
ಸರ್ಕಾರ ಇಷ್ಟು ದಿನ ದೇಶದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ ಎಂದು ವಾದಿಸುತ್ತ ಬಂದಿತ್ತು. ಆದರೆ, ಈಗ ಏಕಾಏಕಿ 10 ಲಕ್ಷ ಹುದ್ದೆಗಳ ಭರ್ತಿಗೆ ಮುಂದಾಗುತ್ತಿದೆ. ಇದು ಯುವಕರ ಜತೆ ಸರ್ಕಾರ ಚಲ್ಲಾಟವಾಗುತ್ತಿದೆ. ಅಗ್ನಿಪಥ ಯೋಜನೆ ಕೂಡ ಉದ್ಯೋಗ ಭದ್ರತೆ ಬುನಾದಿಗೆ ಪೆಟ್ಟು ಕೊಡುವಂಥಾಗಿದೆ. ರಕ್ಷಣಾ ಪಡೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಕಾಯಂ ನೇಮಕಾತಿ ಮಾಡಿಕೊಂಡಿಲ್ಲ. ಈಗ ನಾಲ್ಕು ವರ್ಷ ಸೇವೆ ಸಲ್ಲಿಸಿ ನಾಗರಿಕ ಸಮಾಜಕ್ಕೆ ಮರಳಬೇಕು ಎನ್ನುವ ನೀತಿ ಮುಂದೆ ಯುವಕರ ಜೀವನಕ್ಕೆ ಮಾರಕವಾಗಿ ಪರಿಗಣಮಿಸಲಿದೆ. ಸರ್ಕಾರ ಕೂಡಲೇ ಈ ಅಗ್ನಿಪಥ ಯೋಜನೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಚನ್ನಬಸವ ಜಾನೆಕಲ್, ಜಿಲ್ಲಾ ಕಾರ್ಯದರ್ಶಿ ವಿನೋದ ಕುಮಾರ್, ಹಯ್ನಾಳಪ್ಪ, ಪೀರಸಾಬ್, ನಂದಗೋಕುಲ, ಮಲ್ಲಿಕಾರ್ಜುನ, ಕೃಷ್ಣ, ಅಭಿಲಾಷ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.