ಹುಬ್ಬಳ್ಳಿ: ಜಿಲ್ಲಾಡಳಿತ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಸಾರ್ವಜನಿಕರ ಅಹವಾಲು, ಗ್ರಾಮಸ್ಥರ ಬೇಡಿಕೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಆದ್ಯತೆ ನೀಡಲಾಗುತ್ತಿದೆ. ಮಣಕವಾಡ ಗ್ರಾಮಸ್ಥರ ಬೇಡಿಕೆಗಳನ್ನು ಆದ್ಯತೆ ಮೇಲೆ ಪೂರೈಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಅಣ್ಣಿಗೇರಿ ತಾಲೂಕು ಮಣಕವಾಡದ ಶ್ರೀ ಮೃತ್ಯುಂಜಯೇಶ್ವರ ದಾಸೋಹ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಗಳಿಗೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭೇಟಿ ನೀಡುವುದರಿಂದ ಗ್ರಾಮದಲ್ಲಿನ ಸಮಸ್ಯೆಗಳು ಗಮನಕ್ಕೆ ಬರುತ್ತವೆ. ಅವುಗಳನ್ನು ಬಗೆಹರಿಸಲು ಸಾರ್ವಜನಿಕರ ಸಹಕಾರದೊಂದಿಗೆ ಅಧಿಕಾರಿಗಳ ಇಚ್ಛೆ ಅಗತ್ಯವಾಗಿದೆ ಎಂದರು.
ಮಣಕವಾಡ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
Related Articles
ನಲವಡಿ ಗ್ರಾಪಂ ಅಧ್ಯಕ್ಷೆ ಕಸ್ತೂರಿ ಹರ್ತಿ, ಉಪಾಧ್ಯಕ್ಷೆ ಅನಿತಾ ಗರಗದ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ರಾಜಶೇಖರ ಮುನವಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರೋಜಾ ಹಳಕಟ್ಟಿ, ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಅನಿಲಕುಮಾರ ಜಲಗೇರಿ, ಬಿಇಒ ಬಿ.ಎಸ್. ಮಾಯಾಚಾರಿ, ಮುಖ್ಯಶಿಕ್ಷಕ ಬಿ.ವಿ. ಅಂಗಡಿ, ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್. ಪಾಟೀಲ, ವಲಯ ಅರಣ್ಯಾಧಿಕಾರಿ ಎಸ್.ಜಿ. ಪೂಜಾರ, ಉಪ ಅರಣ್ಯ ವಲಯ ಅಧಿಕಾರಿಗಳಾದ ಬಿ.ವಿ. ಜಾಧವ, ಶಿವಾನಂದ ಬಾಲಕಶೆಟ್ಟಿ, ಅರಣ್ಯ ರಕ್ಷಕರಾದ ಭರಮಪ್ಪ ಸರಾವರಿ, ಸಾವಕ್ಕ ಕುಂಬಾರ ಇನ್ನಿತರರಿದ್ದರು.
ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕಪಡೆದ ಗ್ರಾಮದ ಪ್ರತಿಭಾನ್ವಿತ ಮೂವರು ವಿದ್ಯಾರ್ಥಿನಿಯರನ್ನು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ದಾದಿಯರನ್ನು ಸನ್ಮಾನಿಸಲಾಯಿತು. ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್, ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು. ಶಿಕ್ಷಕಿ ಬಿ.ವಿ. ಪುರೋಹಿತ ಪ್ರಾರ್ಥಿಸಿದರು. ಶಶಿಕುಮಾರ ಅಸ್ಕಿ ಸ್ವಾಗತಿಸಿದರು. ತಹಶೀಲ್ದಾರ್ ಮಂಜುನಾಥ ಅಮಾಸಿ ಪ್ರಾಸ್ತಾವಿಕ ಮಾತನಾಡಿದರು.
ಜಿಲ್ಲಾಡಳಿತದ ಜತೆ ನ್ಯಾಯಾಂಗವೂ ಮುಂದಡಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪುಷ್ಪಲತಾ ಸಿ.ಎಂ. ಮಾತನಾಡಿ, ಹಳ್ಳಿಯ ತಳಮಟ್ಟದ ಸಮಸ್ಯೆಗಳನ್ನು ಅರಿಯಲು ಜಿಲ್ಲಾಡಳಿತದ ಜೊತೆಗೆ ನ್ಯಾಯಾಂಗ ಕೂಡ ಮುಂದಾಗಿದೆ. ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮದ ವರದಿಯನ್ನು ಸುಪ್ರೀಂ ಕೋರ್ಟ್, ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಅವನ್ನು ಕೂಡ ಪರಿಹರಿಸಲು ವಕೀಲರನ್ನು ಉಚಿತವಾಗಿ ಪ್ರಾಧಿಕಾರದಿಂದ ನೇಮಿಸಿ, ಸಮಸ್ಯೆಗೆ ಸ್ಪಂದಿಸಿ ಇತ್ಯರ್ಥಕ್ಕೆ ಪ್ರಯತ್ನ ಮಾಡಲಾಗುವುದು. ಬೇರೆ ಜಿಲ್ಲೆಗಳಲ್ಲಿ ಇದು ಜಾರಿಗೆ ಬಂದಿಲ್ಲ ಎಂದರು.
ವಿವಿಧೆಡೆ ಭೇಟಿ-ಅಹವಾಲು ಸ್ವೀಕಾರ
ಜಿಲ್ಲಾಧಿಕಾರಿಗಳು ಗ್ರಾಮದ ಹತ್ತಿರವಿರುವ ಹಳ್ಳಕ್ಕೆ ಭೇಟಿ ಕೊಟ್ಟು ಒತ್ತುವರಿ ಕುರಿತು ಪರಿಶೀಲಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿಕೊಟ್ಟು ಕಾರ್ಯಚಟುವಟಿಕೆ ಪರಿಶೀಲನೆ ನಡೆಸಿದರು. 3-4 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಇನ್ನಷ್ಟು ಕೊಠಡಿಗಳ ಅವಶ್ಯಕತೆಯಿದೆ ಎಂದು ಶಿಕ್ಷಕರು ಹೇಳಿದಾಗ, ಗ್ರಾಪಂದಿಂದ ನರೇಗಾ ಯೋಜನೆಯಡಿ ಮೇಲ್ಛಾವಣಿ ದುರಸ್ತಿ, ನೆಲಹಾಸು ನಿರ್ಮಾಣಕ್ಕೆ ಸೂಚಿಸಿದರು. ಶಿಥಿಲಾವಸ್ಥೆಯ ಕೊಠಡಿಗಳನ್ನು ಸರಿಪಡಿಸುವಂತೆ ಬಿಇಒಗೆ ಸೂಚಿಸಿದರು. ದಾಸೋಹ ಭವನದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಗ್ರಾಮಸ್ಥರಿಂದ ಅಹವಾಲು ಆಲಿಸಿದರು. ಶಾಲಾ ಕೊಠಡಿಗಳ ನಿರ್ಮಾಣ, ಗ್ರಾಮಕ್ಕೆ ಮೂಲಸೌಕರ್ಯ, ಮುಸ್ಲಿಂ ಸಮಾಜದವರಿಗೆ ಮಸೀದಿ ನಿರ್ಮಿಸಲು ಅನುದಾನ, ಗ್ರಾಮ ಸಹಾಯಕರ ನೇಮಕ, ಗ್ರಾಮ ಒನ್ ಕೇಂದ್ರ, ಹಳ್ಳದ ಹೂಳೆತ್ತುವುದು ಹಾಗೂ ಚೆಕ್‌ಡ್ಯಾಂ ನಿರ್ಮಾಣ, ಬೆಳೆ ಪರಿಹಾರ ಮಂಜೂರಾತಿ, ಒಳಚರಂಡಿ, ಕಾಂಕ್ರೀಟ್ ರಸ್ತೆ ನಿರ್ಮಾಣ, ಸ್ವ-ಸಹಾಯ ಸಂಘಗಳಿಗೆ ಕಡಿಮೆ ಬಡ್ಡಿದರ ಸಾಲ ಸೇರಿದಂತೆ ವಿವಿಧ ಬೇಡಿಕೆಗಳನ್ನು ಗ್ರಾಮಸ್ಥರು ಮುಂದಿಟ್ಟರು.
ಮಳೆ ಯಾಕಾದರೂ ಬರುತ್ತೋ
ಮಳೆ ಸ್ವಲ್ಪ ಹೆಚ್ಚಾದರೂ ನೀರು ಮನೆಗೆ ನುಗ್ಗುತ್ತದೆ. ರಾತ್ರಿ ಸಹ ನಿದ್ರೆ ಮಾಡುವಂತಿಲ್ಲ. ನೀರು ಕಡಿಮೆ ಆಗುವವರೆಗೂ ಮನೆಯಿಂದ ಹೊರಗೆ ಬರುವ ಹಾಗಿಲ್ಲ. ಆದಷ್ಟು ಬೇಗ ಸಮಸ್ಯೆ ಪರಿಹರಿಸಿ, ಪುಣ್ಯ ಬರುತ್ತದೆ ಎಂದು ಮಣಕವಾಡದ ಜನತಾ ಪ್ಲಾಟ್ ನಿವಾಸಿಗಳು ಜಿಲ್ಲಾಧಿಕಾರಿ ಅವರಲ್ಲಿ ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿಗಳು ಜನತಾ ಪ್ಲಾಟ್‌ಗೆ ಭೇಟಿಕೊಟ್ಟ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಮನವಿ ಮಾಡುತ್ತ, ಇಲ್ಲಿ ಒಟ್ಟು 96 ಮನೆಗಳಿದ್ದು, ಗಟಾರಿನ ಪೈಪ್‌ಗ್ಳು ಚಿಕ್ಕದಾಗಿವೆ. ಹೀಗಾಗಿ ನೀರು ಹರಿದು ಹೋಗುತ್ತಿಲ್ಲ. ಮಳೆಯಾದರೆ ಸಾಕು ನೀರೆಲ್ಲ ನಿಂತು ಬಿಡುತ್ತದೆ. ಆಗ ಗಟಾರು ನೀರು ಮತ್ತು ಮಳೆ ನೀರು ರಸ್ತೆಗೆ ಹರಿಯುತ್ತದೆ. ಮನೆಗೆ ನುಗ್ಗುತ್ತದೆ. ಈ ಸಮಸ್ಯೆಯಿಂದಾಗಿ ಮಳೆ ಯಾಕಾದರೂ ಬರುತ್ತದೋ ಎನ್ನುವಂತಾಗಿದೆ. ಕೂಡಲೇ ತೊಂದರೆ ನಿವಾರಿಸಿ ಎಂದು ಆಗ್ರಹಿಸಿದರು.
ಶೀಘ್ರ ಬೆಳೆಹಾನಿ ಪರಿಹಾರ
ಮಣಕವಾಡದಲ್ಲಿ ಮಳೆಗಾಲದ ವೇಳೆ ಹಳ್ಳದ ನೀರು ನುಗ್ಗಿ ತೀವ್ರ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಯೋಚಿಸಲಾಗಿದೆ. ಶಿಥಿಲಾವಸ್ಥೆ ಶಾಲಾ ಕೊಠಡಿಗಳ ದುರಸ್ತಿಗೆ ಹಾಗೂ ಹೊಸ ಕೊಠಡಿಗಳನ್ನು ಮಂಜೂರು ಮಾಡಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಗ್ರಾಮದಲ್ಲಿ ಬಹಳಷ್ಟು ರೈತರಿಗೆ ಬೆಳೆ ಪರಿಹಾರ ದೊರೆತಿಲ್ಲ. ಅದನ್ನು ಕಂದಾಯ ಇಲಾಖೆಯಿಂದ ಪರಿಹರಿಸಲಾಗುವುದು. ಜನತಾ ಪ್ಲಾಟ್ ನಿವಾಸಿಗಳು ಮಳೆ ಬಂದರೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಪಂಚಾಯತ್ ಅನುದಾನದಲ್ಲಿ ಯುಜಿಡಿ, ರೇನ್ ವಾಟರ್ ಡ್ರೇನ್ಸ್ ಮಾಡಿದ್ದಾರೆ. 30-35 ಕುಟುಂಬದವರಿಗೆ ಶೌಚಾಲಯವಿಲ್ಲ. ಜಿಪಂ ಸಿಇಒ ಜತೆ ಚರ್ಚಿಸಿ ಶೌಚಾಲಯ ನಿರ್ಮಿಸಲು ಹಾಗೂ ಪಿಐಡಿ, ಪಿಡಬ್ಲ್ಯೂಡಿ ಅವರಿಗೆ ಮನವಿ ಮಾಡಿ ವಿಶೇಷ ಅನುದಾನದಲ್ಲಿ ಒಳಚರಂಡಿ ನಿರ್ಮಿಸಲು ತಿಳಿಸುವೆ ಎಂದರು.