Advertisement

ಹೊರಗುತ್ತಿಗೆ ಪದ್ಧತಿ ರದ್ದು ಪಡಿಸಲು ಆಗ್ರಹ

05:25 PM Jan 14, 2020 | Suhan S |

ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ದಿನಗೂಲಿ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಒಂದು ದಿನದ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಜಿಲ್ಲಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಈಗಾಗಲೇ ಮಹಾ ಮಂಡಲದ ನೇತೃತ್ವದಲ್ಲಿ ಮೂರು ಹಂತದ ಹೋರಾಟಗಳನ್ನು ಮಾಡಲಾಗಿದೆ. ಆದರೂ ಸರ್ಕಾರ ಇದುವರೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಿಲ್ಲ ಎಂದು ದೂರಿದರು. ಹಾಗಾಗಿ ವಿಧಾನ ಮಂಡಲದ ಅಧಿವೇಶನ ನಡೆಯುವ ಅವಧಿಯಲ್ಲಿ ಬೆಂಗಳೂರು ಚಲೋ ನಡೆಸಿ, ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು. ಇದರ ಎಲ್ಲಾ ಪರಿಣಾಮಗಳಿಗೂ ರಾಜ್ಯ ಸರ್ಕಾರವೇ ಹೊಣೆ ಯಾಗುತ್ತದೆ ಎಂದರು. ಆದ್ದರಿಂದ ರಾಜ್ಯ ಸರ್ಕಾರಿ ಇಲಾಖೆಗಳು, ನಿಗಮಗಳು, ಜಿಪಂಗಳಲ್ಲಿ ಜಾರಿಯಲ್ಲಿರುವ ಹೊರಗುತ್ತಿಗೆ ನೌಕರರನ್ನು ನೇಮಿಸುವ ಪದ್ದತಿಯನ್ನೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಅನೇಕ ವಾಹನ ಚಾಲಕರು ಮಂಜೂರಿಲ್ಲದೆ ಹುದ್ದೆಗಳಲ್ಲಿ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದು, ಅವರನ್ನು ಕೆಲಸದಿಂದ ತೆಗೆದರೆ ವಾಹನಗಳೇ ನಿಂತು ಹೋಗುತ್ತವೆ. ಈ ಬಗ್ಗೆ ಸಿಎಂಗೆ ಮನವಿ ಸಲ್ಲಿಸಿ ತಕ್ಷಣ ತಿದ್ದುಪಡಿ ಮಾಡಿ, ಅವಶ್ಯ ಹುದ್ದೆಗಳಲ್ಲಿ ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುವ ವಿಶೇಷ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.

ಅರ್ಹ ದಿನಗೂಲಿ ನೌಕರರಿಗೆ ಹಿಂದಿನ ದಿನಗೂಲಿ ಸೇವೆಗೆ ವೈಟೇಜ್‌ ಫಾರ್‌ ಸರ್ವಿಸ್‌ ಎಂದು ಮೂರು ವರ್ಷಕ್ಕೆ ಒಂದು ಇನ್‌ಕ್ರಿಮೆಂಟ್‌ ಕೊಟ್ಟು ಮೂಲವೇತನ ಫಿಕ್ಸ್‌ ಮಾಡಬೇಕು. ಈಗ ಎಷ್ಟೇ ವರ್ಷ ಸೇವೆ ಸಲ್ಲಿಸಿದ್ದರೂ ಮೂಲ ವೇತನಕ್ಕಷ್ಟೇ ನಿಗದಿಪಡಿಸಲಾಗಿದೆ. ಇದೂ ಪೂರ್ವಾನ್ವಯವಾಗಿ ಜಾರಿಗೆ ತರಬೇಕೆಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಬೇಕೆಂದು ಆಗ್ರಹಿಸಿದರು. ಧರಣಿಯಲ್ಲಿ ಸಂಘದ ಪದಾಧಿಕಾರಿಗಳಾದ ಸಿ.ನರಸೇಗೌಡ, ಕೆ.ಸಿ.ಕೃಷ್ಣ, ಮಣಿರಾಜು, ಎಲ್‌.ಮಹದೇವ, ಶಿವರಾಜು, ಎಂ.ವೀರಯ್ಯ, ಸ್ವಾಮಿಗೌಡ, ಚಲುವೇಗೌಡ, ದೊಡ್ಡಯ್ಯ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next