Advertisement

ಕಬ್ಬಿನ ಬಾಕಿ ಪಾವತಿಗೆ ಆಗ್ರಹ; 11ಕ್ಕೆ ಬಿಎಸ್‌ಎಸ್‌ಕೆಗೆ ಬೀಗ

06:00 PM Jun 28, 2022 | Team Udayavani |

ಬೀದರ: ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಜಿಲ್ಲಾ ರೈತ ಸಂಘ ಜು. 11ರಂದು ಬಿಎಸ್‌ಎಸ್‌ಕೆ ಕಾರ್ಖಾನೆಗೆ ಬೀಗ ಜಡಿದು, ಹೆದ್ದಾರಿ ತಡೆ ನಡೆಸಲು ನಿರ್ಧರಿಸಿದೆ. ಈ ಕುರಿತು ಮಂಗಳವಾರ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವದಲ್ಲಿ ಪ್ರಮುಖರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಿಎಂಗೆ ಬರೆದ ಮನವಿ ಪತ್ರ ಸಲ್ಲಿಸಿದ್ದಾರೆ. ಜು. 10ರೊಳಗೆ ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಬಿಎಸ್‌ಎಸ್‌ಕೆ ಕಾರ್ಖಾನೆಗೆ ಕಬ್ಬು ಪೂರೈಸಿರುವ ರೈತರ ಖಾತೆಗೆ ಈವರೆಗೆ ಹಣ ಜಮೆ ಮಾಡಿಲ್ಲ. ವರ್ಷಪೂರ್ತಿ ಕಬ್ಬು ಬೆಳೆಸಿ ಸಾಗಾಟ ಮಾಡಿದ ರೈತ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಹಿಂದೆ ಮಾರ್ಚ್‌ ತಿಂಗಳಲ್ಲಿ ಕಾರ್ಖಾನೆಗೆ ಮುತ್ತಿಗೆ ಹಾಕಿದಾಗ ಮೇ 15ರೊಳಗೆ ಸಂಪೂರ್ಣ ರೈತರ ಹಣ ಸಂದಾಯ ಮಾಡುವ ಕುರಿತು ಆಡಳಿತ ಮಂಡಳಿ ನೀಡಿದ್ದ ಭರವಸೆ ಹುಸಿಯಾಗಿದೆ.

ಈ ವರ್ಷ ಕಾರ್ಖಾನೆ ಇಳುವರಿ ಕೇವಲ ಶೇ.05 ತೋರಿಸಿದ್ದು, ಈವರೆಗೆ ಯಾವ ಕಾರ್ಖಾನೆ ಇಷ್ಟೊಂದು ಕಡಿಮೆಯ ರಿಕವರಿ ದಾಖಲಾಗಿಲ್ಲ ಎಂದು ದೂರಿದ್ದಾರೆ. ಕಾರ್ಖಾನೆ ವ್ಯಾಪ್ತಿಯ ಗಿಡ-ಮರ ತಮ್ಮ ಮನಬಂದಂತ ದರಕ್ಕೆ ಮಾರಾಟ ಮಾಡಿದ್ದು, ಮೊಲಾಸಿಸ್‌ ಕೂಡ ಇತರೆ ಕಾರ್ಖಾನೆಗಳಿಗಿಂತ ಪ್ರತಿ ಟನ್‌ಗೆ 4000 ರೂ. ಕಡಿಮೆ ದರಕ್ಕೆ ಮಾರಾಟ ಮಾಡಲಾಗಿದೆ.

ಆಡಳಿತ ಮಂಡಳಿ ಉದ್ದೇಶಪೂರ್ವಕವಾಗಿ ಕಾರ್ಖಾನೆಗೆ ನಷ್ಟ ಮಾಡುತ್ತಿದ್ದು, ಅವರಿಗೆ ರೈತರು ಮತ್ತು ಕಾರ್ಖಾನೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಆರೋಪಿಸಿರುವ ಸಂಘ, ಕಾರ್ಖಾನೆ ಯಾವುದೇ ಸಂಪತ್ತು ಮಾರಾಟ ಮಾಡಬೇಕಾದರೆ ಸಾಮಾನ್ಯ ಸಭೆ ಮಾಡಿ, ರೈತ ಸದಸ್ಯರ ಅಪ್ಪಣೆ ಪಡೆದು ನಿರ್ಣಯಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಈ ವೇಳೆ ಸಂಘದ ಪ್ರಮುಖರಾದ ದಯಾನಂದ ಸ್ವಾಮಿ, ಶ್ರೀಮಂತ ಬಿರಾದಾರ, ಬಾಬುರಾವ್‌ ಜೊಳದಾಬಕ, ನಾಗಯ್ನಾ ಸ್ವಾಮಿ, ಪ್ರವೀಣ ಕುಲಕರ್ಣಿ, ಪ್ರಕಾಶ ಬಿರಾದಾರ, ಮಲ್ಲಿಕಾರ್ಜುನ ಚಕ್ಕಿ, ಶ್ರೀನಿವಾಸರೆಡ್ಡಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next