Advertisement

ಸಂಚಾರಕ್ಕೆ ತೊಡಕು: ಕಠಿನ ಕ್ರಮಕ್ಕೆ ಆಗ್ರಹ

11:32 AM May 05, 2022 | Team Udayavani |

ಉಪ್ಪುಂದ: ಬಿಜೂರು ಗಾ.ಪಂ. ವ್ಯಾಪ್ತಿಯಲ್ಲಿ ಪಂ.ನಿಂದ ಅಭಿ ವೃದ್ಧಿಗೊಂಡಿರುವ ರಸ್ತೆಯನ್ನು ಅಗೆದು ಸಾರ್ವಜನಿಕರ ಸಂಚಾರಕ್ಕೆ ತೊಡಕು ಉಂಟುಮಾಡಿರುವ ಘಟನೆ ನಡೆದಿದೆ.

Advertisement

ಬಿಜೂರು ಗ್ರಾಮದ ರಾ.ಹೆದ್ದಾರಿ 66ರಿಂದ ದೀಟಿ ದೇವಸ್ಥಾನ ರಸ್ತೆ ಮೂಲಕ ಹೊಲ್ಮನೆ ಕೇರಿಗೆ ಸಂಪರ್ಕ ಕಲ್ಪಿಸುವ ಪಂ. ರಸ್ತೆಯನ್ನು ಜೆಸಿಬಿಯನ್ನು ಬಳಸಿ ರಸ್ತೆಯನ್ನು ಅಗೆದು ಹಾಕಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಚಾಯತ್‌ ಹಾಗೂ ವಿವಿಧ ಇಲಾಖೆಗಳ ಅನುದಾನದಲ್ಲಿ ನಿರ್ಮಾಣ ಗೊಂಡ ರಸ್ತೆಯನ್ನು ತಮ್ಮ ಮನೆಗೆ ಸಂಪರ್ಕ ಇಲ್ಲ ಎನ್ನುವ ಕಾರಣದಿಂದ ಅಗೆದು ಹಾಕಿದ್ದಾರೆ.

ಸ್ಥಳೀಯರು ಗ್ರಾ.ಪಂ. ಅಧ್ಯಕ್ಷರಿಗೆ ಹಾಗೂ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಅವರಿಗೆ ಮಾಹಿತಿ ನೀಡಿದ್ದು ಅದರಂತೆ ಸ್ಥಳಕ್ಕೆ ಬಂದಾಗ ಉಡಾಫೆಯಾಗಿ ಮಾತನಾಡಿರುವುದಾಗಿ ತಿಳಿದು ಬಂದಿದೆ. ಸುಮಾರು 30 ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ರಸ್ತೆಯನ್ನು 20 ಅಡಿ ದೂರದ ವರೆಗೆ ಜೆಸಿಬಿ ಮೂಲಕ ಕಿತ್ತು ಹೊಂಡ ಮಾಡಲಾಗಿದೆ. ಮಣ್ಣನ್ನು ಅಗೆದು ರಸ್ತೆಯ ಪಕ್ಕದ ಮನೆಯ ಕಾಂಪೌಡ್‌ನ‌ ಒಳಗೆ ಹಾಕಲಾಗಿದೆ. ನಿತ್ಯ ನೂರಾರು ಜನರು ಸಂಚರಿಸುವ ಪ್ರಮುಖ ರಸ್ತೆಯಾಗಿದ್ದು ಈ ಭಾಗದ ಜನರಿಗೆ ಸಂಚರಿಸಲು ಸಮಸ್ಯೆಯಾಗಿದೆ.

2008ರಲ್ಲಿ ಈ ರಸ್ತೆ ನಿರ್ಮಿಸಿದ್ದು 2009ರಲ್ಲಿ ಗ್ರಾ.ಪಂ. ಅನುದಾನದಿಂದ ಅಭಿವೃದ್ಧಿ ಮಾಡಲಾಗಿತ್ತು. ಬಳಿಕ ತಾ.ಪಂ, ಜಿ.ಪಂ. ಅನುದಾನವನ್ನು ಅಭಿವೃದ್ಧಿಗಾಗಿ ಬಳಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಎಂಎಲ್‌ಸಿ ಅನುದಾನದಲ್ಲಿ 5 ಲಕ್ಷ ರೂ.ಯನ್ನು ಕಾಮಗಾರಿಗಾಗಿ ಮೀಸಲಿಡಲಾಗಿದೆ.

Advertisement

ಕಠಿನ ಕ್ರಮಕ್ಕೆ ಆಗ್ರಹ

ಸರಕಾರದ ಅನುದಾನದಲ್ಲಿ ನಿರ್ಮಿಸಿದ ರಸ್ತೆಯನ್ನು ಜೆಸಿಬಿ ಮೂಲಕ ಅಗೆದು ಸಾರ್ವಜನಿಕರಿಗೆ ತೊಂದರೆ ನೀಡಿರುವುದು ಅಲ್ಲದೇ ಸರಕಾರದ ಸ್ವತ್ತನ್ನು ಹಾಳುಗೆಡವಿ ನಷ್ಟ ಉಂಟು ಮಾಡಿರುವುದರಿಂದ ಇದಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದೂರು ನೀಡಲಾಗಿದೆ

ಒಂದು ಮನೆಯವರು ಜೆಸಿಬಿ ತಂದು ಏಕಾಏಕಿ ಬಂದು ರಸ್ತೆಯನ್ನು ಅಗೆದು ಹಾಕಿದ್ದಾರೆ. ಸರಕಾರಿ ಆಸ್ತಿಯನ್ನು ಧ್ವಂಸ ಮಾಡಿರುವುದು ಕಾನೂನು ಪ್ರಕಾರ ತಪ್ಪು, ಸಮಸ್ಯೆಗಳಿದಿದ್ದರೆ ಗ್ರಾ.ಪಂ.ನ ಗಮನಕ್ಕೆ ತರಬಹುದಿತ್ತು. ಈಗಾಗಲೇ ಈ ರಸ್ತೆಗೆ ಲಕ್ಷಾಂತರ ರೂ. ಅನುದಾನವನ್ನು ವಿನಿಯೋಗಿಸಲಾಗಿತ್ತು ಈ ಬಗ್ಗೆ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. -ಸತೀಶ ತೊಳಾರ್‌, ಅಭಿವೃದ್ಧಿ ಅಧಿಕಾರಿ ಗ್ರಾ.ಪಂ. ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next