ಬೆಳಗಾವಿ: ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ (ಸಂ)ದ ವತಿಯಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಯುವ ಅಧ್ಯಕ್ಷ ಸುನೀಲ ಹಂಪಣ್ಣವರ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸದಸ್ಯರು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯ ಬದಲು ವೈಜ್ಞಾನಿಕ ಬೆಲೆ ನಿಗದಿ ಪಡಿಸುವ ಯೋಜನೆ ಜಾರಿಗೊಳಿಸಬೇಕು. ಸರಕಾರಿ ನೌಕರರ ವೇತನ ಪರಿಷ್ಕರಿಸುವ ಮಾದರಿಯಲ್ಲಿ ಕಾಲ-ಕಾಲಕ್ಕೆ ವೈಜ್ಞಾನಿಕ ಬೆಲೆಗಳ ಪರಿಷ್ಕರಣೆಯಾಗಬೇಕು. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗಾಗಿ ಸಮಗ್ರ ಜಲ ನೀತಿ ಘೋಷಣೆ ಮಾಡಬೇಕು. ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆಗಳಿಗೆ ಅನುದಾನ ಘೋಷಿಸಬೇಕು ಎಂದು ಆಗ್ರಹಿಸಿದರು.
ಸತತವಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳಿಂದ ತೊಂದರೆಗೊಳಗಾಗುತ್ತಿರುವ ಉತ್ತರ ಕರ್ನಾಟಕ ಭಾಗದ ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಲು 10 ಸಾವಿರ ಕೋಟಿ ರೂ.ಗಳ ಆಪತ್ತು ನಿಧಿ ಸ್ಥಾಪಿಸಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ಹಾನಿಗೊಳಗಾಗುವ ಬೆಲೆಗಳಿಗೆ ವೈಜ್ಞಾನಿಕ ಪರಿಹಾರ ಘೋಷಿಸಬೇಕು. ಕಾಡು ಪ್ರಾಣಿಗಳ ದಾಳಿಯಿಂದ ಪ್ರಾಣ ಕಳೆದುಕೊಳ್ಳುವವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ನೀಡಬೇಕು. ಕಾಡು ಪ್ರಾಣಿಗಳು ಹೊಲಗಳಿಗೆ ನುಗ್ಗದಂತೆ ಕಾರಿಡಾರ್‌ಯೋಜನೆ ರೂಪಿಸಬೇಕು ಎಂದು ಹೇಳಿದರು.
ಪಶು ಭಾಗ್ಯ, ಗಂಗಾ ಕಲ್ಯಾಣ ಮುಂತಾದ ಯೋಜನೆಗಳ ಫಲಾನುಭವಿಗಳ ಆಯ್ಕೆಗಾಗಿ ಜನಪ್ರತಿನಿಧಿಗಳಿಲ್ಲದ ಸಮಿತಿ ರಚಿಸಬೇಕು. ಫಲಾನುಭವಿಗಳ ಆಯ್ಕೆ ಬಹಿರಂಗವಾಗಿ ನಡೆಯಬೇಕು. ಬೆಳಗಾವಿಯಲ್ಲಿ ಮಾವು ಮತ್ತು ದ್ರಾಕ್ಷಿ ಸಂರಕ್ಷಣಾ ಘಟಕಗಳನ್ನು ಪ್ರಾರಂಭಿಸಬೇಕು. ರಸಗೊಬ್ಬರ ಹಾಗೂ ಬಿತ್ತನೆಯ ಬೀಜ, ಔಷಧಗಳನ್ನು ಜಿಎಸ್ ಟಿಯಿಂದ ಮುಕ್ತಗೊಳಿಸಬೇಕು. ಫಸಲ್ ಬಿಮಾ ಯೋಜನೆಯನ್ನು ಕಬ್ಬಿಗೂ ವಿಸ್ತರಿಸಬೇಕು. ಹೊಲಗಳಿಗೆ ಸಂಪರ್ಕ ರಸ್ತೆ ಕಲ್ಪಿಸುವ ಯೋಜನೆ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ಕೃಷಿಕ ಸಮಾಜದ ಸುರೇಶ ಮರಲಿಂಗಣ್ಣವರ, ಆರ್.ಎಸ್. ದರ್ಗೆ, ಅಡಿವೆಪ್ಪ ಕುಂದರಗಿ, ನೇಮಿಚಂದ್ರಾ ಮುಂತಾದವರು ಉಪಸ್ಥಿತರಿದ್ದರು.