Advertisement

ಕೋಡಿಯಲ್ಲಿ ರಿಂಗ್‌ ರೋಡ್‌ಗೆ ಬೇಡಿಕೆ

11:47 PM Mar 04, 2020 | Sriram |

ಕುಂದಾಪುರ: ಚರ್ಚ್‌ರೋಡ್‌ನಿಂದ ಟೈಲ್‌ ಪ್ಯಾಕ್ಟರಿ ಬಳಿ ಸೇತುವೆ ದಾಟಿದ ಕೂಡಲೇ ಮೊದಲು ಕೋಡಿ ವಾರ್ಡ್‌ ಎಂದು ಇದ್ದುದು ಈಗ ಇನ್ನೊಂದಷ್ಟು ದೂರ ಟೈಲ್‌ಫ್ಯಾಕ್ಟರಿ ವಾರ್ಡ್‌ಗೆ ಸೇರ್ಪಡೆಯಾಗಿದೆ. ಶಿವಾಲಯದ ಅನಂತರವಷ್ಟೇ ಕೋಡಿ ವಾರ್ಡ್‌ ಆರಂಭವಾಗುತ್ತದೆ. ಹೀಗೆ ಸೇತುವೆ ಅನಂತರದಿಂದ ಕೋಡಿ ಸೀವಾಕ್‌ವರೆಗೆ, ಈಚೆ ಚಕ್ರೇಶ್ವರಿ ದೇವಸ್ಥಾನವರೆಗೆ ರಿಂಗ್‌ರೋಡ್‌ ಮಾಡಬೇಕು ಎನ್ನುವುದು ಇಲ್ಲಿನ ಜನರ ಬೇಡಿಕೆ.

Advertisement

ನದಿಬದಿಯಿಂದ ಬಂದು ಬೋಟ್‌ಗಳು ನಿಲ್ಲುವಲ್ಲಿ ಮುಂದುವರಿದು ಸೀವಾಕ್‌ ತನಕ ಒಂದು ಚಂದದ ರಿಂಗ್‌ರೋಡ್‌ ಇದ್ದರೆ ವಾಹನ ಸರಾಗ ಓಡಾಟಕ್ಕಷ್ಟೇ ಉಪಯೋಗ ಮಾತ್ರವಲ್ಲ, ಉಪ್ಪುನೀರು ತಡೆಗೂ ಉಪಕಾರಿ ಎನಿಸುತ್ತದೆ.

ಕೋಡಿ ಉತ್ತರ ವಾರ್ಡ್‌ನಲ್ಲಿ ಸುದಿನ ಸುತ್ತಾಟ ನಡೆಸಿದ ಸಂದರ್ಭ ಜನ ರಿಂಗ್‌ರೋಡ್‌ಗೆ ಬೇಡಿಕೆ ಇಟ್ಟರು.

ಕೃಷಿ ನಾಶ
ಉಪ್ಪುನೀರು ಬರುವ ಕಾರಣ ಈ ಭಾಗದ ಅನೇಕರ ಕೃಷಿ ನಾಶವಾಗಿದೆ. ಇದರಿಂದಾಗಿ ಇರುವ ಸಣ್ಣಪುಟ್ಟ ಜಾಗದಲ್ಲೂ ಕೆಲವರು ಕೃಷಿ ಕಾಯಕ ಮಾಡುವುದನ್ನೇ ಬಿಟ್ಟಿದ್ದಾರೆ. ಶಿವಾಲಯದಿಂದ ಚಕ್ರೇಶ್ವರಿ ದೇವಸ್ಥಾನವರೆಗೆ ಗದ್ದೆಗಳಿಗೆ ಉಪ್ಪುನೀರಿನ ನುಗ್ಗಾಟ ಇರುತ್ತದೆ.

ರಿಂಗ್‌ರೋಡ್‌ ಮಾಡಿದರೆ ಈ ಉಪ್ಪುನೀರಿನ ಹರಿವು ಕಡಿಮೆಯಾಗಬಹುದು ಎನ್ನುವುದು ಇಲ್ಲಿನವರ ಲೆಕ್ಕಾಚಾರ. ಈ ಸಮಸ್ಯೆಯನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಗಮನಕ್ಕೂ ತರಲಾಗಿದ್ದು ಅವರು ಭೇಟಿ ನೀಡಿ ವೀಕ್ಷಿಸಿದ್ದಾರೆ ಎನ್ನುತ್ತಾರೆ ಊರವರು.

Advertisement

ಪಾರ್ಕಿಂಗ್‌ ಜಾಗ ಇಲ್ಲ
ಲೈಟ್‌ ಹೌಸ್‌, ಸೀವಾಕ್‌, ಸಮುದ್ರತೀರ ಎಂದು ಜನಸಾಗರ ನೋಡಲು ಬರುತ್ತದೆ. ಹಾಗೆ ಬಂದವರು ದಿಕ್ಕುದೆಸೆ ಇಲ್ಲದೇ ವಾಹನ ನಿಲ್ಲಿಸಬೇಕಾಗುತ್ತದೆ. ಸೀವಾಕ್‌ ಬಳಿ ಪಾರ್ಕಿಂಗ್‌ಗೆ ಜಾಗ ಇದ್ದರೂ ಲೈಟ್‌ಹೌಸ್‌ ಬಳಿ ಇದ್ದರೂ ವಾಹನ ನಿಲ್ಲಿಸುವಂತಿಲ್ಲ. ಮಣ್ಣು, ಮರಳಿನಲ್ಲಿ ಪ್ರವಾಸಿಗರ ವಾಹನ ಹೂತುಹೋಗುವುದು, ಸ್ಥಳೀಯರು ಅದನ್ನು ಎತ್ತಲು ಸಹಕರಿಸುವುದು ಸದಾ ನಡೆಯುತ್ತಿರುತ್ತದೆ. ಹಾಗಾಗಿ ಇಲ್ಲೊಂದು ಸುಸಜ್ಜಿತ ಪಾರ್ಕಿಂಗ್‌ ತಾಣ ಬೇಕು ಎನ್ನುತ್ತಾರೆ ರಾಘವೇಂದ್ರ ಅವರು.

ಮೈದಾನ ಇಲ್ಲ
ಶಾಲೆ, ಕಾಲೇಜುಗಳಿದ್ದರೂ ಅವುಗಳಿಗೆ ಮೈದಾನವಿದೆ. ಆದರೆ ಇಲ್ಲಿರುವ ನೂರಾರು ಮನೆಗಳ ಜನರಿಗೆ, ಮಕ್ಕಳಿಗೆ ಆಟವಾಡಲು ಮೈದಾನ ಇಲ್ಲ. ಮೈದಾನ ನಿರ್ಮಾಣದ ಬೇಡಿಕೆ ಕೂಡ ಅನೇಕ ವರ್ಷಗಳಿಂದ ಇದೆ. ಹಾಗೆಯೇ ರಸ್ತೆ ಬದಿ ಚರಂಡಿ ಇಲ್ಲ. ಮನೆಗಳಿಗೂ ಒಳಚರಂಡಿ ಇಲ್ಲ. ಒಂರ್ಥದಲ್ಲಿ ಚರಂಡಿಯೇ ಇಲ್ಲದ ಪ್ರದೇಶದಂತಿದೆ.

ಕಡಲತಡಿ
ಅತಿಸುಂದರವಾದ ಸೀವಾಕ್‌ಗೆ ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅತಿ ಉದ್ದದ ಸಮುದ್ರ ತೀರ ಇದಾಗಿದ್ದು ಕೆಲ ಪ್ರವಾಸಿಗರು ಹಾಗೂ ಕೆಲವರು ಇದನ್ನು ತೀರಾ ಕೆಟ್ಟದಾಗಿ ಇಟ್ಟುಕೊಳ್ಳುತ್ತಾರೆ. ತಮ್ಮ ಮೋಜು ಮಸ್ತಿಗೆ ಈ ಸಮುದ್ರತೀರವನ್ನು ಬಳಸಿಕೊಳ್ಳುತ್ತಾರೆ. ವಿಕೃತ ಚೇಷ್ಟೆಯ ಅಂಗವಾಗಿ ಕುಡಿದು ಅದರ ಬಾಟಲಿಗಳನ್ನು ಸಮುದ್ರ ತೀರದಲ್ಲಿ ಎಸೆದು ಹೋಗುತ್ತಾರೆ. ಕ್ಲೀನ್‌ ಕುಂದಾಪುರ ಪ್ರಾಜೆಕ್‌ rನವರು ಸಹಿತ ಇಲ್ಲಿ ಸ್ವಯಂಸೇವಕರಾಗಿ ವಾರ ವಾರ ಸ್ವತ್ಛತಾ ಕಾರ್ಯ ನಡೆಸುವವರಿಗೆ , ಮೋಜು ಮಸ್ತಿಗೆ ಬರುವವರ ಮದ್ಯದ ಬಾಟಲಿಗಳನ್ನು ಎತ್ತುವುದೇ ಒಂದು ಕೆಲಸವಾಗುತ್ತಿದೆ. ಕಸ ಹಾಕಬೇಡಿ, ಮದ್ಯದ ಬಾಟಲಿ ಹಾಕಬೇಡಿ ಎನ್ನುವ ಫ‌ಲಕಗಳು ಕುಡಿದ ಅನಂತರ ಕಾಣುವುದೇ ಇಲ್ಲ.

ದಾಖಲೆ ಇಲ್ಲ
ಈ ಭಾಗದ ನೂರಾರು ಮನೆಗಳಿಗೆ ದಾಖಲೆಯೇ ಇಲ್ಲ. ನೂರಾರು ವರ್ಷಗಳಿಂದ ವಾಸವಿದ್ದೇವೆ ಎನ್ನುವ ಇಲ್ಲಿನ ಮೀನುಗಾರ ಕುಟುಂಬಗಳಿಗೆ ಕರಾವಳಿ ನಿಯಂತ್ರಣ ಕಾಯ್ದೆಯನ್ವಯ ಹಕ್ಕುಪತ್ರ ಇಲ್ಲ. ಹಕ್ಕುಪತ್ರ ನೀಡಬಹುದು ಎಂದು ಸಿಆರ್‌ಝಡ್‌ ಪ್ರಾಧಿಕಾರ ಹೇಳಿದೆ. ಹಾಗಿದ್ದರೂ ಇನ್ನೂ ಲಭಿಸಿಲ್ಲ.

ಆಗಬೇಕಾದ್ದೇನು?
-ಸೇತುವೆಯಿಂದ ಸೀವಾಕ್‌ ತನಕ ರಿಂಗ್‌ರೋಡ್‌ಗೆ ಬೇಡಿಕೆ
-ಚರಂಡಿ ಕಾಮಗಾರಿ
-ಸೋನ್‌ ಶಾಲೆ ಬಳಿ ರಸ್ತೆ

ರಿಂಗ್‌ ರೋಡ್‌ ಆಗಬೇಕಿದೆ
ಹತ್ತಾರು ಮನೆಯವರ ಕೃಷಿಭೂಮಿಗೆ ಉಪ್ಪುನೀರು ನುಗ್ಗಿ ಕೃಷಿನಾಶವಾಗುತ್ತದೆ. ಆದ್ದರಿಂದ ಇದರ ತಡೆಗೆ ಜಟ್ಟಿಗೇಶ್ವರ ದೇವಸ್ಥಾನದಿಂದ ಚಕ್ರಮ್ಮ ದೇವಸ್ಥಾನವರೆಗೆ ರಿಂಗ್‌ ರೋಡ್‌ ನಿರ್ಮಾಣವೇ ಸೂಕ್ತ. ಶಾಸಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಡಿಯುವ ನೀರಿನ ಪೈಪ್‌ಲೈನ್‌, ಟ್ಯಾಂಕ್‌ ರಚನೆ ಕಾಮಗಾರಿ ಆಗುತ್ತಿದೆ. ರಸ್ತೆ ಅಭಿವೃದ್ಧಿ ಆಗುತ್ತಿದೆ.
-ಲಕ್ಷ್ಮೀಬಾಯಿ, ಸದಸ್ಯರು, ಪುರಸಭೆ

ಆಟದ ಮೈದಾನ ಅಗತ್ಯ
ಕೋಡಿಯಲ್ಲಿ ಸಮುದ್ರ ತೀರದ ಉದ್ದಕ್ಕೂ ನೂರಾರು ಮನೆಗಳಿದ್ದರೂ ಐದಾರು ಕಿ.ಮೀ. ದೂರದಲ್ಲಿ ಆಟದ ಮೈದಾನವಿಲ್ಲ. ಮಕ್ಕಳಿಗೆ, ಯುವಕರಿಗೆ ಸಂಜೆಯ ವೇಳೆಗೆ ಆಟವಾಡಲು ದೈಹಿಕ ವ್ಯಾಯಾಮಕ್ಕಾಗಿ ಒಂದು ಸುಸಜ್ಜಿತ ಆಟದ ಮೈದಾನದ ಅಗತ್ಯವಿದೆ.
-ಶಶಾಲ್‌, ಕೋಡಿ

ಪಾರ್ಕಿಂಗ್‌ ಜಾಗ ಅಗತ್ಯ
ಲೈಟ್‌ಹೌಸ್‌ ಬಳಿ ಪ್ರವಾಸಿಗರ ವಾಹನಗಳು ಆಗಾಗ ಹೂತು ಹೋಗುತ್ತವೆ. ಸೀವಾಕ್‌, ಲೈಟ್‌ಹೌಸ್‌, ಬೀಚ್‌ ಎಂದು ವೀಕ್ಷಣೆಗೆ ನೂರಾರು ವಾಹನಗಳು ಬಂದರೂ ಪಾರ್ಕಿಂಗ್‌ಗೆ ಸೂಕ್ತವಾದ ಜಾಗ ಇಲ್ಲ. ಆದ್ದರಿಂದ ಲೈಟ್‌ಹೌಸ್‌ ಪಕ್ಕ ಪಾರ್ಕಿಂಗ್‌ ತಾಣ ಮಾಡಬೇಕು.
-ವಿಜಯ, ಕೋಡಿ

Advertisement

Udayavani is now on Telegram. Click here to join our channel and stay updated with the latest news.

Next