Advertisement

ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

04:33 PM Jan 04, 2018 | Team Udayavani |

ಯಾದಗಿರಿ: ಜಿಲ್ಲೆಯ ಸಮಾಜ ಕಲ್ಯಾಣ, ಬಿಸಿಎಂ ಹಾಗೂ ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ಗ್ರೂಪ್‌ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಸದಸ್ಯರು ಬುಧವಾರ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿ ನಿಲಯಗಳು, ವಸತಿ ಶಾಲೆಗಳಲ್ಲಿ ಸರಕಾರದಿಂದ ಮಂಜೂರಾಗಿರುವ ಡಿ ಗ್ರೂಪ್‌ ಹುದ್ದೆಗಳಲ್ಲಿ ಅಡುಗೆಯವರು, ಅಡುಗೆ ಸಹಾಯಕರು, ಮತ್ತು ಕಾವಲುಗಾರರಾಗಿ ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಕನಿಷ್ಠ ವೇತನ, ಪಿ.ಎಫ್‌, ಇಎಸ್‌ಐ ಸೌಲಭ್ಯ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪಿಎಫ್‌ ಹಾಗೂ ಇಎಸ್‌ಐ ಹೆಸರಿನಲ್ಲಿ ನೌಕರರ ವೇತನದಲ್ಲಿ ಹಣ ಕಡಿತ ಮಾಡಲಾಗಿದೆ ಮತ್ತು ಸರಕಾರದಿಂದಲೂ ಹಣ ಪಡೆಯಲಾಗಿದೆ. ಆದರೆ ಇಲ್ಲಿಯವರೆಗೆ ನೌಕರರ ಹೆಸರಿನಲ್ಲಿ ಪಿಎಫ್‌ ಮತ್ತು ಇಎಸ್‌ಐ ಖಾತೆಗಳನ್ನು ತೆರೆಯುತ್ತಿಲ್ಲ. ನೌಕರರ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡುತ್ತಿಲ್ಲ. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡುತ್ತಿಲ್ಲ. 10 ತಿಂಗಳಿನಿಂದ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಕಾರ್ಮಿಕರಿಗೆ ಹಲವಾರು ತಿಂಗಳಿನಿಂದ ಬಾಕಿ ಉಳಿದಿರುವ ವೇತನ ಪಾವತಿಸಬೇಕು. 2017ರ ಏಪ್ರಿಲ್‌ನಲ್ಲಿ ಪರಿಷ್ಕರಿಸಿದ ಕನಿಷ್ಠ ವೇತನ ಕಾಯ್ದೆಯ ವೇತನ ದರದಂತೆ ನಿಗದಿಯಾಗಿರುವ ಮಾಸಿಕ ವೇತನ ಪೂರ್ಣ ಹಣವನ್ನು ನೌಕರರ ಬ್ಯಾಂಕ್‌ ಖಾತೆಗೆ ನೇರವಾಗಿ ಪಾವತಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರ ಬೇಡಿಕೆಗಳು ಜ. 21ರೊಳಗೆ ಪರಿಹರಿಸದಿದ್ದಲ್ಲಿ ಜ. 22ರಿಂದ ಡಿಸಿ ಕಚೇರಿ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ, ಜಿಲ್ಲಾಧ್ಯಕ್ಷ ಡಿ. ಉಮಾದೇವಿ, ರಾಮು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next