Advertisement

ಪುತ್ತೂರು ಜಿಲ್ಲೆ ಆಗಲಿ : ಮಂಗಳೂರಿನ ತಲೆಶೂಲೆ ಇಳಿಯಲಿ

10:02 PM Feb 20, 2021 | Team Udayavani |

ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರವಾದ ಮಂಗಳೂರಿನ ಒತ್ತಡ ಕಡಿಮೆಯಾಗಬೇಕೆಂದರೆ ಪುತ್ತೂರು ಜಿಲ್ಲಾ ಕೇಂದ್ರವಾಗಬೇಕು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಚಟುವಟಿಕೆಗಳು ಮಂಗಳೂರಿನಲ್ಲಿ ನಡೆಯುವಾಗ, ಸ್ಥಳೀಯ ಆಡಳಿತದ ಮೇಲೆ ಹೊಣೆಗಾರಿಕೆ ಹೆಚ್ಚು. ಆದ ಕಾರಣ, ಮಂಗಳೂರಿನ ಮೇಲಿನ ಒತ್ತಡ ನಿವಾರಣೆಗೆ ಪುತ್ತೂರು ಜಿಲ್ಲೆ ಆಗುವುದು ಅನಿವಾರ್ಯ.

Advertisement

ಪುತ್ತೂರು : ಗ್ರಾಮೀಣ ಜಿಲ್ಲೆಯಾಗಿ ಪುತ್ತೂರನ್ನು ಘೋಷಿಸಿದರೆ ಹಲವು ಆಯಾಮಗಳಲ್ಲಿ ಲಾಭದಾಯಕ. ಬರೀ ಪುತ್ತೂರಿಗೆ ಮಾತ್ರ ಅಲ್ಲ, ಮಂಗಳೂರಿಗೂ ಲಾಭದ ಪಾಲು ಸಿಗಲಿದೆ!

ದ.ಕ. ಜಿಲ್ಲಾ ಕೇಂದ್ರ ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದೆ. ಈ ಕ್ರಾಂತಿ ಗ್ರಾಮೀಣ ಜಿಲ್ಲೆಯ ಮೂಲಕ ಇನ್ನಷ್ಟು ವಿಸ್ತರಣೆಗೊಳ್ಳಲು ಸಾಧ್ಯ. ಜಿಲ್ಲೆಗಳು ಪ್ರತ್ಯೇಕ ಗೊಂಡರೂ ಕ್ರಮಿಸುವ ದೂರ ಬಹಳಷ್ಟು ಇಲ್ಲದ ಕಾರಣ ಪರಸ್ಪರ ಅಭಿವೃದ್ಧಿಗೆ ಸಹಕರಿಸಲೂ ಸಾಧ್ಯವಾಗುತ್ತದೆ.

ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ನಗರಕ್ಕೆ ಬರುವ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ಜನರು ವೈದ್ಯಕೀಯ, ಶಿಕ್ಷಣ ಇತ್ಯಾದಿ ಉದ್ದೇಶ ಗಳಿಗೆ ಮಂಗಳೂರು ಪಟ್ಟಣಕ್ಕೆ ಬರುತ್ತಾರೆ. ಉದಾಹರಣೆಗೆ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದಾದರೆ ಜನರು ಹೊರಡುವುದು ನೇರ ವಾಗಿ ಜಿಲ್ಲಾ ಆಸ್ಪತ್ರೆಗೆ. ತಾಲೂಕು ವೈದ್ಯರೂ ಜಿಲ್ಲಾಸ್ಪತ್ರೆ ಕಡೆಗೆ ದಾರಿ ತೋರುತ್ತಾರೆ.
ಹೀಗಾಗಿ ಪುತ್ತೂರು ಜಿಲ್ಲಾ ಕೇಂದ್ರವಾಗಿ ರೂಪುಗೊಂಡಲ್ಲಿ ಮಂಗಳೂರಿನ ಒತ್ತಡ ಕಡಿಮೆ ಆಗಲಿದೆ. ಜಿಲ್ಲಾ ಸರಕಾರಿ ಆಸ್ಪತ್ರೆಯ ಸೌಲಭ್ಯಗಳು ದೊರೆತು 54 ಕಿ.ಮೀ.ದೂರ ಓಡಾಟ ನಡೆಸುವ ಪ್ರಮೇಯ ತಪ್ಪಲಿದೆ. ಆಸುಪಾಸಿನ ಎಲ್ಲ ತಾಲೂಕುಗಳು 25ರಿಂದ 30 ಕಿ.ಮೀ. ದೂರದಲ್ಲಿ ಪುತ್ತೂರನ್ನು ತಲುಪಬಹುದು. ಇದರಿಂದ ಸಂಚಾರ ಸಮಯ ಉಳಿತಾಯದೊಂದಿಗೆ ತುರ್ತು ಅಗತ್ಯಗಳನ್ನು ಸಕಾಲದಲ್ಲಿ ಪೂರೈಸಬಹುದು. ಈಗಾಗಲೇ ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಪುತ್ತೂರೂ ವೇಗವಾಗಿ ಬೆಳೆಯುತ್ತಿದ್ದು, ಜಿಲ್ಲಾ ಕೇಂದ್ರವಾದರೆ ಈ ಬೆಳ ವಣಿಗೆಗೆ ಮತ್ತಷ್ಟು ವೇಗ ದೊರಕಲಿದೆ. ಸರಕಾರಿ-ಖಾಸಗಿ ಮೆಡಿಕಲ್‌ ಕಾಲೇಜು,
ಉನ್ನತ ದರ್ಜೆಯ ಶೈಕ್ಷಣಿಕ ಕೇಂದ್ರಗಳು ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಗೂ ಸಾಧ್ಯವಾಗಲಿದೆ. ಜಿಲ್ಲಾ ಮಟ್ಟದ ವ್ಯವಹಾರಗಳಿಗಾಗಿ ಪ್ರತಿ ಬಾರಿ ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಇರದು. ಈಗಿನ ತಾಲೂಕು, ಜಿಲ್ಲಾಡಳಿತಗಳ ಮೇಲಿರುವ ಒತ್ತಡ ಕಡಿಮೆಯಾಗಲಿದೆ.ಜಿಲ್ಲಾಕೇಂದ್ರವಾಗಿ ರೂಪುಗೊಂಡ ಅನಂತರ ಪುತ್ತೂರು ನಗರಸಭೆ ಮಹಾ ನಗರಪಾಲಿಕೆ ಆಗಿ ಮೇಲ್ದರ್ಜೆಗೇರಬಹುದು. ಈಗ ನಗರದ ಜನಸಂಖ್ಯೆ ಅದರ ಸನಿಹದಲ್ಲೇ ಇದೆ. ಇದರಿಂದ ಹೆಚ್ಚಿನ ಅನುದಾನ ದೊರೆತು ಮೂಲಸೌಕರ್ಯ ವೃದ್ಧಿಗೆ ಪೂರಕವಾಗಲಿದೆ.

ಕೈಗಾರಿಕಾ ಕಾರಿಡಾರ್‌ ಸ್ಥಾಪನೆ, ಸಾಗರ ಉತ್ಪನ್ನಗಳ ಘಟಕಗಳ ನಿರ್ಮಾಣದ ಪ್ರಸ್ತಾವನೆಗೆ ಜೀವ ಬರಲಿದೆ. ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದರೆ ನಗರ ಸಭೆ ಇದ್ದ ಅಧಿಕಾರದ ವ್ಯಾಪ್ತಿ, ಅನುದಾನದ ವ್ಯಾಪ್ತಿಗಿಂತ ದುಪ್ಪಟ್ಟು ಅವಕಾಶಗಳು ದೊರೆ ಯುತ್ತವೆ. ಇದರಿಂದ ಉದ್ದೇಶಿತ ಯೋಜನೆ ಗಳನ್ನು ಜಾರಿಗೊಳಿಸಲು ಸಾಧ್ಯವಾಗಲಿದೆ.

Advertisement

ಗ್ರಾಮಾಂತರ ತಾಲೂಕುಗಳ ಕಾರ್ಯ ವ್ಯಾಪ್ತಿಯಿಂದ ಹೊರಗಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯನ್ನು ಜಿಲ್ಲಾಕೇಂದ್ರಕ್ಕೆ ಪೂರಕವಾಗಿ ಪುತ್ತೂರಿಗೆ ವರ್ಗಾವಣೆ ಆಗಬೇಕಿದೆ. ಈ ಸಂಬಂಧ ಶಾಸಕ ಸಂಜೀವ ಮಠಂದೂರು ಅವರು ಗೃಹ ಸಚಿವರನ್ನು ಭೇಟಿ ಮಾಡಿದ್ದು, ಸ್ಪಂದನೆ ದೊರೆತಿದೆ. 2010ರಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವ್ಯಾಪ್ತಿಯೊಳಗಿದ್ದ ಮಂಗಳೂರು ಮಹಾನಗರವನ್ನು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಗೆ ತರ ಲಾಗಿತ್ತು. ಮಂಗಳೂರು ಕಂದಾಯ ವಿಭಾಗ ವ್ಯಾಪ್ತಿಯಲ್ಲಿ ಕಮಿಷನರೆಟ್‌ ಬರುವುದರಿಂದ ಎಸ್ಪಿ ಕಚೇರಿ ಆ ವ್ಯಾಪ್ತಿಯಲ್ಲಿ ಅಧಿಕಾರ ಹೊಂದಿಲ್ಲ. ಕಮಿಷನರೆಟ್‌ ಅನ್ನು ಉದ್ಘಾಟಿಸಿದ್ದ ಅಂದಿನ ಗೃಹಸಚಿವ ಡಾ| ವಿ.ಎಸ್‌. ಆಚಾರ್ಯ ಅವರು ಮಂಗಳೂರಿನಲ್ಲಿರುವ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಭರವಸೆ ನೀಡಿದ್ದರು. ಪ್ರಸ್ತುತ ಎಸ್ಪಿ ಕಚೇರಿ ಸ್ಥಾಪನೆಗೆ ನಗರದ ಹೊರವಲಯದ ಬನ್ನೂರಿನಲ್ಲಿ ಕಂದಾಯ ಇಲಾಖೆ 2 ಎಕ್ರೆ ಭೂಮಿ ಗುರುತಿಸಿದೆ. ಪಹಣಿ ಸಂಬಂಧಿಸಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಂಗಳೂರಿನ ಅನಂತರದ ಎರಡನೇ ದೊಡ್ಡ ಪಟ್ಟಣವಾಗಿರುವ ಪುತ್ತೂರಿನ ಗಡಿ ಭಾಗದಲ್ಲಿ ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಕಡಬ ತಾಲೂಕುಗಳು ಬೆಸೆದುಕೊಂಡಿವೆ.

ಫರಂಗಿಪೇಟೆಯಿಂದ ಸಂಪಾಜೆ ತನಕ, ಚಾರ್ಮಾಡಿ ಘಾಟಿ ತನಕ ಹಾಗೂ ಕೇರಳ ಗಡಿಭಾಗದ ಈಶ್ವರಮಂಗಲ, ಜಾಲಸೂರು, ಪಾಣಾಜೆ, ವಿಟ್ಲ ಭಾಗಗಳು ಬರುತ್ತವೆ. ಪುತ್ತೂರು ಕೇಂದ್ರ ಸ್ಥಾನವಾದರೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಹೆಚ್ಚು ಪ್ರಯೋಜನವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next