Advertisement

ಶುದ್ಧ ನೀರು ಪೂರೈಕೆಗೆ ಆಗ್ರಹ

10:43 AM Mar 07, 2019 | |

ಭದ್ರಾವತಿ: ತಾಲೂಕಿನ ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿಗೆ ಅವಶ್ಯವಾದ ನೀರಿನ ಘಟಕಗಳನ್ನು ಸ್ಥಾಪಿಸದಿರುವುದರಿಂದ ನಾಗರಿಕರು ಶುದ್ಧ ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂದು ತಾಪಂ ಸದಸ್ಯರು ನೀರಾವರಿ ಇಲಾಖೆ ವಿರುದ್ಧ ಒಕ್ಕೊರಲಿನಿಂದ ಹರಿಹಾಯ್ದರು.

Advertisement

ಬುಧವಾರ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಆಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರು ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆಯ ಆರಂಭದ ದಿನಗಳಲ್ಲಿಯೇ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗುತ್ತಿದ್ದು 2 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. 

ಅದೂ ಅಶುದ್ಧವಾದ ನೀರನ್ನು ಬಿಡಲಾಗುತ್ತದ್ದು, ಕೂಡ್ಲಿಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಲ್ಲಿಯಲ್ಲಿ ಬಿಡುತ್ತಿರುವ ನೀರು ಕೆಸರು ಮಣ್ಣಿನಿಂದ ಕೂಡಿದೆ. ಇದನ್ನು ನಾಗರಿಕರು ಹೇಗೆ ಕುಡಿಯಲು ಸಾಧ್ಯ ಎಂದು ಸದಸ್ಯ ಮಂಜುನಾಥ್‌ ಕದಿರೇಶ್‌ ಕುಡಿಯುವ ನೀರು ಸರಬರಾಜು ಇಲಾಖೆ
ಅಧಿಕಾರಿಗಳನ್ನು ಪ್ರಶ್ನಿಸಿದರು. 

ಮತ್ತೋರ್ವ ಸದಸ್ಯ ಧರ್ಮೇಗೌಡ ಪ್ರತೀ ಸಭೆಯಲ್ಲಿಯೂ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ನಾವು ಹೇಳಿದರೂ ಸಹ ಇಲಾಖೆ ಅದರ ಬಗ್ಗೆ ಗಮನ ಹರಿಸದೆ ಇರುವುದರ ಬಗ್ಗೆ ತಾಪಂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸದಸ್ಯೆ ಯಶೋದಮ್ಮ ಗೋಣಿಬೀಡು ಮಾತನಾಡಿ, ಶಂಕರಘಟ್ಟ, ಸಿಂಗನಮನೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು. 

ಸದಸ್ಯೆ ಲಕ್ಷ್ಮೀ ಮಾತನಾಡಿ, ದೇವರ ನರಸೀಪುರ ಸುತ್ತಮುತ್ತ ಕುಡಿಯುವ ನೀರಿನ ಸಮಸ್ಯೆ ಇದ್ದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕೋರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
 
ಸದಸ್ಯ ಪ್ರೇಂ ಕುಮಾರ್‌ ಮಾತನಾಡಿ, ಬಾರಂದೂರು, ಹಳೇಬಾರಂದೂರು ಸೇರಿದಂತೆ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ನೀರಿನ ಕಾಯಿನ್‌ಬೂತ್‌ಗಳ ಸಂಖ್ಯೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಸದಸ್ಯ ಅಣ್ಣಾಮಲೆ ಮಾತನಾಡಿ, ಬೇಸಿಗೆ ಕಾಲ ಆರಂಭವಾಗಿದ್ದು ಕೂಡ್ಲಿಗೆರೆ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿನ ಕರೆಗಳಲ್ಲಿನ ನೀರಿನ ಸಂಗ್ರಹಣೆ ಹೂಳು ತೆಗೆಯುವ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ನಿರಾವರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

Advertisement

ನೀರಾವರಿ ಇಲಾಖೆಯಿಂದ ಸಭೆಗೆ ಹಾಜರಾಗಿದ್ದ ಕುಡಿಯುವ ನೀರಿನ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ ಎ.ಎಸ್‌. ನಾರಪ್ಪ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ತಾಲೂಕಿನಲ್ಲಿ ಮಂಜೂರಾದ ಶುದ್ಧ ಕುಡಿಯುವ ನೀರಿನ ಘಟಕಗಳ ಒಟ್ಟು ಸಂಖ್ಯೆ 41 ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು ಅದರ ಪೈಕಿ 21 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 19ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. 

ಕೆಸರು ನೀರಿಗೆ ಕಾರಣ: ಕೆಲವೆಡೆ ನೀರಿನ ಪೈಪ್‌ ಒಡೆದಿರುವ ಕಾರಣ ನಲ್ಲಿಯಲ್ಲಿ ಕೆಸರು ನೀರು ಬರುತ್ತಿದೆ ಅದನ್ನು ಸರಿ ಪಡಿಸಲು ಕ್ರಮ ಕೈಗೊಳ್ಳುತ್ತೇವೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಕನಿಷ್ಠ ಆ ಪ್ರದೇಶದಲ್ಲಿನ ಜನಸಂಖ್ಯೆ 1ಸಾವಿರ ಇರಬೇಕು. ಅದಕ್ಕಿಂತ ಕಡಿಮೆ ಜನರಿರುವ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆ ಮಾಡಲು ಸರ್ಕಾರದ ನಿಯಮದಲ್ಲಿ ಅವಕಾಶವಿಲ್ಲದಿರುವುದರಿಂದ 600-700 ಜನರಿರುವ ಗ್ರಾಮಗಳನ್ನು ಅದರ ನೆರೆಹೊರೆ ಗ್ರಾಮದ ಜೊತೆ ಸೇರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next