Advertisement

ಸೊರಬ: ನೂತನ ಗ್ರಾಮ ಪಂಚಾಯ್ತಿ ಸ್ಥಾಪನೆಗೆ ಒತ್ತಾಯಿಸಿ ಯಲಸಿ ಗ್ರಾಮಸ್ಥರಿಂದ ಮನವಿ

04:03 PM May 24, 2022 | Team Udayavani |

ಸೊರಬ : ತಾಲ್ಲೂಕಿನ ಯಲಸಿ, ಗುಂಡಶೆಟ್ಟಿಕೊಪ್ಪ, ತಾವರೆಹಳ್ಳಿ ಹಾಗೂ ಕರಡಿಗೇರಿ ಗ್ರಾಮಸ್ಥರು ಯಲಸಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಸ್ಥಾಪಿಸುವಂತೆ ಆಗ್ರಹಿಸಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಾಣಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

Advertisement

ಸೊರಬ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು, ಜನಸಂಖ್ಯೆ ಆಧಾರದ ಮೇಲೆ ಈ ಹಿಂದೆ ಹಳೇಸೊರಬ ಗ್ರಾಮ ಪಂಚಾಯಿತಿಯನ್ನು ರದ್ದುಗೊಳಿಸಿ ಆ ವ್ಯಾಪ್ತಿಯಲ್ಲಿ ಯಲಸಿ, ಗುಂಡಶೆಟ್ಟಿಕೊಪ್ಪ, ತಾವರೆಹಳ್ಳಿ ಹಾಗೂ ಕರಡಿಗೇರಿ ಗ್ರಾಮಗಳನ್ನು ಹೆಚ್ಚೆ ಹಾಗೂ ಮುಟುಗುಪ್ಪೆ ಗ್ರಾಮ ಪಂಚಾಯಿತಿಗೆ ಸೇರಿಸಲಾಗಿದೆ. ಆದರೆ ಈ ಗ್ರಾಮ ಪಂಚಾಯಿತಿ ಕೇಂದ್ರಗಳು ಈ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ದೂರವಾಗಿದ್ದರಿಂದ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ಅಡೆತಡೆ ಉಂಟಾಗುತ್ತಿರುವುದರಿಂದ ಯಲಸಿ ಗ್ರಾಮದಲ್ಲಿ ಹೊಸದಾಗಿ ಗ್ರಾಮ ಪಂಚಾಯಿತಿ ಸ್ಥಾಪಿಸಿದರೆ ಮೇಲ್ಕಂಡ ಸುತ್ತಮುತ್ತಲಿನ ಗ್ರಾಮಗಳಿಗೆ ಕೇವಲ 1ಕಿ. ಮೀ ವ್ಯಾಪ್ತಿಯಲ್ಲಿ ಸೌಲಭ್ಯಗಳು ಜನರಿಗೆ ದೊರಕಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಯಲಸಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯೂ ಇರುವುದರಿಂದ ಮೇಲಿನ ಎಲ್ಲ ಗ್ರಾಮಗಳು ಪಡಿತರ ಪಡೆಯಲು ಅನುಕೂಲವಾಗಿದೆ. ಈಗ ಸೇರ್ಪಡೆಗೊಳಿಸಲಾದ ಮುಟುಗುಪ್ಪೆ ಹಾಗೂ ಹೆಚ್ಚೆ ಗ್ರಾಮ ಪಂಚಾಯಿತಿಗೆ ನಾಗರಿಕ ಸೌಲಭ್ಯಗಳನ್ನು ಪಡೆಯಲು ಗ್ರಾಮಸ್ಥರು ಸುಮಾರು 10 ಕಿ.ಮೀ ದೂರ ಕ್ರಮಿಸಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆಯುವಂತಾಗಿದೆ. ಹಾಗೂ ಸೂಕ್ತ ವಾಹನಗಳ ಸೌಲಭ್ಯಗಳು ಇಲ್ಲ. ಇದರಿಂದ ವಯಸ್ಸಾದವರು, ವಿಕಲಚೇತನರು ಬಡವರು ಕೇಂದ್ರಸ್ಥಾನಕ್ಕೆ ತೆರಳಲು ದುಸ್ತರವಾಗಿರುತ್ತದೆ. ಜನಸಂಖ್ಯೆ ಕೊರತೆ ಎದುರಾದರೆ ಮುಟುಗುಪ್ಪೆ ವ್ಯಾಪ್ತಿಯಲ್ಲಿರುವ ಕಕ್ಕರಸಿ, ತಂಡಿಗೆ ಗ್ರಾಮಗಳನ್ನು ಸೇರಿಸಿದರೆ ಅವರಿಗೂ ಅನುಕೂಲವಾಗಲಿದೆ. ಒಂದೊಮ್ಮೆ ಯಲಸಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಸ್ಥಾಪನೆ ಮಾಡಲು ಹಿಂದೇಟು ಹಾಕಿದರೆ ಎಲ್ಲ ಗ್ರಾಮಸ್ಥರು ಒಗ್ಗಟ್ಟು ಪ್ರದರ್ಶಿಸಿ ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಯಲಸಿ ಗ್ರಾಮ ಸಮಿತಿ ಅಧ್ಯಕ್ಷ ತೇಕರಪ್ಪ, ಡಿ. ಬುಕ್ಕೇಶ್, ಕೆ.ಎಸ್. ಗಣಪತಿ, ಎಂ.ಡಿ.ಸಿದ್ದಪ್ಪ, ಡಿ.ಲೋಕೇಶ್, ಎಂ.ಕೆ.ಕೃಷ್ಣಪ್ಪ, ಕೆ.ಎಲ್.ಕುಮಾರಸ್ವಾಮಿ, ವಿ.ಜಾನಕಪ್ಪ, ಗುಂಡಶೆಟ್ಟಿಕೊಪ್ಪ ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ನಾಗರಾಜಪ್ಪ, ಕೆ.ನಿಂಗಪ್ಪ, ಎಂ.ಡಿ.ಬಸವರಾಜ್, ಲೋಕಪ್ಪ, ಹರೀಶ್, ತಾವರೆಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಶ್ಯಾಮಪ್ಪ, ಈರಪ್ಪ, ಕಡರಿಗೇರಿ ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದಪ್ಪ, ಲಕ್ಷ್ಮಣ, ಮಂಜಪ್ಪ, ಕೆ,ಗಣಪತಿ, ಹವಳೇಶ್, ಮಹೇಂದ್ರ ಸೇರಿದಂತೆ ಇತರರಿದ್ದರು.

ಇದನ್ನೂ ಓದಿ : ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ

Advertisement
Advertisement

Udayavani is now on Telegram. Click here to join our channel and stay updated with the latest news.

Next