Advertisement

ಎಂಎಸ್‌ಪಿ ಕಾನೂನು ಬದ್ದಕ್ಕೆ ಆಗ್ರಹ

03:09 PM Sep 21, 2022 | Team Udayavani |

ಕಲಬುರಗಿ: ಎಂಎಸ್‌ಪಿ ಕಾನೂನು ಬದ್ಧಗೊಳಿಸಬೇಕು ಮತ್ತು ರೈತರಿಂದ ನೇರವಾಗಿ ಕೃಷ್ಟಿ ಉತ್ಪನ್ನಗಳನ್ನು ಖರೀದಿಸಲು ಸಗಟು, ಚಿಲ್ಲರೆ ವ್ಯಾಪಾರವನ್ನು ಸರಕಾರವೇ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಅಖೀಲ ಭಾರತ ರೈತ, ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

Advertisement

ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ ಸಂಘಟನೆ ಸದಸ್ಯರು, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಬಡ ಜನತೆಯ ಜೀವನದ ಮೇಲೆ ನಿಮ್ಮ ಸರ್ಕಾರವು ಬರೆ ಎಳೆಯುತ್ತಿದೆ. ಒಂದೆಡೆ ಬೀಜ, ರಸಗೊಬ್ಬರಗಳ ಬೆಲೆ ದುಬಾರಿ ಮಾಡಿ ಮತ್ತು ಅದರ ಮೇಲೆ ಇರುವ ಸಬ್ಸಿಡಿ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ. ಇದರಿಂದ ಬಡ ರೈತನ ನಿರ್ವಹಣೆಯಿಂದ ಕೃಷಿ ಕಳಚಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರವೇ ಬೆಳೆಗಳನ್ನು ಕೊಂಡುಕೊಂಡು ರೈತರಿಗೆ ಪ್ರತಿ ಎಕರೆಗೆ ತಗಲುವ ವೆಚ್ಚ ಒಳಗೊಂಡು ಒಂದೂವರೆ ಪಟ್ಟು ಬೆಂಬಲ ಬೆಲೆ ಸೇರಿಸಿ ಬೆಲೆ ನಿಗದಿ ಮಾಡಲು ಎಂಎಸ್‌ಪಿ ಕಾನೂನು ಬದ್ಧಗೊಳಿಸುವುದು ಅತ್ಯವಶ್ಯಕವಾಗಿದೆ ಎಂದು ಆಗ್ರಹಿಸಿದರು.

ಇದರೊಂದಿಗೆ ಕೃಷಿ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಸಗಟು ಹಾಗೂ ಚಿಲ್ಲರೆ ವ್ಯಾಪಾರವನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳಬೇಕು (ಆಲ್‌ಔಟ್‌ ಸ್ಟೇಟ್‌ ಟ್ರೇಡಿಂಗ್‌) ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಗಣಪತರಾವ್‌ ಕೆ. ಮಾನೆ, ಉಪಾಧ್ಯಕ್ಷ ರಾಜೇಂದ್ರ ಅತನೂರು, ವಿಶ್ವನಾಥ ಸಿಂಗೆ, ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್‌.ಬಿ, ಸದಸ್ಯರಾದ ನೀಲಕಂಠ ಎಂ. ಹುಲಿ, ವಿಠ್ಠಲ ರಾಠೊಡ, ಮಲ್ಲಯ್ಯ ಗುತ್ತೇದಾರ, ಶರಣಯ್ಯ ಗುತ್ತೇದಾರ, ಶಂಭುಲಿಂಗ ಸರಡಗಿ, ಮಲ್ಲಿಕಾರ್ಜುನ ಜಾನೆ, ವಾಹೀದ್‌ ರವರನ್ನೊಳಗೊಂಡು ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next