Advertisement

ಅಪಘಾತ ನೆಪದಲ್ಲಿ ಅಪಹರಿಸಿ ಹಣಕ್ಕೆ ಬೇಡಿಕೆ

03:26 PM Jun 23, 2017 | Team Udayavani |

ಉಳ್ಳಾಲ: ಅಪಘಾತದ ವಿಚಾರದಲ್ಲಿ ತಂಡವೊಂದು ಕೇರಳ ಮೂಲದ ಇಬ್ಬರನ್ನು ಅಪಹರಿಸಲು ಯತ್ನಿಸಿ, ಒಬ್ಬನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣ ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಉಚ್ಚಿಲದಲ್ಲಿ ನಡೆದಿದ್ದು, ಉಳ್ಳಾಲ ಮತ್ತು ಮಂಜೇಶ್ವರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಅಪಹೃತ ನನ್ನು ಕುಂಜತ್ತೂರು ಬಳಿ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕೇರಳದ ತ್ರಿಕ್ಕರಿಪುರ ಪಡನ್ನ ನಿವಾಸಿ ತಾಹಿಝ್ ಅಪಹರಣಕ್ಕೀಡಾದವರು, ಅಶ್ರಫ್‌ ಅಪಹರಣಕಾರರಿಂದ ತಪ್ಪಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದುದರಿಂದ ಅಪಹರಣ ಪ್ರಕರಣ ಸುಖಾಂತ್ಯಗೊಂಡಿತು.

ಘಟನೆಯ ವಿವರ 
ಕೇರಳ ತ್ರಿಕ್ಕರಿಪುರ ನಿವಾಸಿ ಅಶ್ರಫ್‌ ವಿದೇಶದಿಂದ ಬಜಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅವರನ್ನು ಕರೆದುಕೊಂಡು ಹೋಗಲು ಅವರ ಸಂಬಂಧಿ ತಾಹಿಝ್ ತನ್ನ ಕಾರಿನಲ್ಲಿ ಬಂದಿದ್ದರು. ಬಜಪೆಯಿಂದ ಕೇರಳಕ್ಕೆ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಸೋಮೇಶ್ವರ ಉಚ್ಚಿಲ ಬಳಿ ತಾಹಿಝ್ ಅವರ ಕಾರು ಬೈಕೊಂದಕ್ಕೆ ಢಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಸ್ಥಳೀಯವಾಗಿ ಸೇರಿದ್ದ ತಂಡ ಬೈಕ್‌ನ ಸಂಪೂರ್ಣ ವೆಚ್ಚ ನೀಡುವಂತೆ ಒತ್ತಾಯಿಸಿತ್ತು. 

ತಾಹಿಝ್  ಅವರು  ಅದಕ್ಕೆ  ಒಪ್ಪಿದ್ದು, ಈ ಸಂದರ್ಭದಲ್ಲಿ  ತಾಹಿಝ್ ಮತ್ತು ಅಶ್ರಫ್‌ ಅವರನ್ನು ಮಾತುಕತೆಯ  ನೆಪದಲ್ಲಿ ಕಾರೊಂದರ  ಪಕ್ಕ ಕರೆದಿದ್ದು, ಇಬ್ಬರನ್ನು  ಕಾರಿನ ಒಳಗೆ ಹಾಕಿ ಅಪಹರಣಕ್ಕೆ ಯತ್ನಿಸಿದರು. 

ಈ ಸಂದರ್ಭದಲ್ಲಿ ಅಶ್ರಫ್‌ ತಪ್ಪಿಸಿಕೊಂಡಿದ್ದು, ಅಪಹರಣ ಕಾರರ ಕೈಗೆ ಸಿಕ್ಕಿದ್ದ ತಾಹಿಝ್ನನ್ನು ಅಪಹರಣಕಾರರು   ಮಂಜೇಶ್ವರ ಕಡೆ ಕರೆದುಕೊಂಡು ಹೋಗಿದ್ದರು.

Advertisement

ಐದು ಲಕ್ಷ ರೂ.ಗೆ ಬೇಡಿಕೆ
ತಾಹಿಝ್ನನ್ನು ಬಿಡುಗಡೆಗೆ ಐದು ಲಕ್ಷ ರೂ. ಬೇಡಿಕೆ ಇಟ್ಟಿದ್ದ ತಂಡ ಅಶ್ರಫ್‌ಗೆ ಕರೆ ಮಾಡಿತ್ತು. ಈ ಸಂದರ್ಭದಲ್ಲಿ ಮಂಜೇಶ್ವರದ ಕಡಂಬಾರ್‌ ಮಸೀದಿ ಬಳಿ ಹಣ ತರುವಂತೆ ತಂಡ ತಿಳಿಸಿದ್ದು, ಅಶ್ರಫ್‌ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಡಂಬಾರ್‌ನಲ್ಲಿ ಅಪಹರಣಕಾರರು ತಪ್ಪಿಸಿಕೊಂಡಿದ್ದರು. ಬಳಿಕ ಉಳ್ಳಾಲ ಮತ್ತು ಮಂಜೇಶ್ವರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಅಶ್ರಫ್‌ನಿಂದ ಹಣವನ್ನು ಕುಂಜತ್ತೂರು ಬಳಿ ನೀಡುವಂತೆ ತಿಳಿಸಿದಾಗ ಎರಡೂ ಕಡೆ ಪೊಲೀಸರ ದಾಳಿಯನ್ನರಿತ ತಂಡ ತಾಹಿಝ್ನನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದೆ.

ಅಜ್ಜಿನಡ್ಕ ಮೂಲದವರು
ಅಪಹರಣಕಾರರು ಅಜ್ಜಿನಡ್ಕ ಮೂಲದವರೆಂದು ಪೊಲೀಸರಿಗೆ ಮಾಹಿತಿ ಬಂದಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next