ಮೈಸೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ನಗರದ ಪುರಭವನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ನಾಯಕ ಸಮುದಾಯದ ಹಿರಿಯ ಮುಖಂಡರಾಗಿರುವ ಹಾಗೂ ಪ್ರಗತಿಪರ ವಿಚಾರಧಾರೆಗಳನ್ನು ಹೊಂದಿರುವ ಸತೀಶ್ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಅವರಿಗೆ ಮಂತ್ರಿಸ್ಥಾನ ದೊರೆಯದೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಶಾಸಕ ಸತೀಶ್ ಜಾರಕಿಹೋಳಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಹಿಂದುಳಿದ ಜಾತಿ, ವರ್ಗಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅವರನ್ನು ದೂರವಿಡಲಾಗಿದ್ದು,
ಈ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮೌನ ವಹಿಸಿರುವುದು ಖಂಡನೀಯ. ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಹೊರಗಿಡುವುದರಿಂದ ಮುಂದೆ ಕಾಂಗ್ರೆಸ್ ಪಕ್ಷದ ಸಂಘಟನೆಗೆ ತೊಂದರೆಯಾಗಲಿದ್ದು, ಹೀಗಾಗಿ ಶಾಸಕರಿಗೆ ಮಂತ್ರಿಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾ ಸಂಚಾಲಕ ಮುರುಡಹಳ್ಳಿ ಮಹದೇವು, ನಾಯಕ ಮುಖಂಡ ದ್ಯಾವಪ್ಪನಾಯಕ, ಹುಣಸೂರಿನ ಕಾಂಗ್ರೆಸ್ ಮುಖಂಡ ಗನಾಯಕ, ಗೌರಮ್ಮ, ಸತೀಶ್ ಜಾರಕಿಹೊಳಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಸ್.ಆರ್.ರವಿಕುಮಾರ್, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಇನ್ನಿತರರು ಭಾಗವಹಿಸಿದ್ದರು.