Advertisement

ಎಂ95 ಮಾಸ್ಕ್ ಗೆ ಬೇಡಿಕೆ; ಹೆಚ್ಚಿನೆಡೆ ಅಲಭ್ಯ

12:49 AM Mar 05, 2020 | mahesh |

ಮಂಗಳೂರು: ಕೊರೊನಾ ಬಾಧೆ ರಾಜ್ಯಕ್ಕೂ ತಟ್ಟಿರುವ ಹಿನ್ನೆಲೆ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ಮುಂದುವರಿದಿದೆ. ಈ ನಡುವೆ ಮಂಗಳವಾರದಿಂದ ಏಕಾಏಕಿ ವಿವಿಧ ಮೆಡಿಕಲ್‌ ಶಾಪ್‌ಗ್ಳಲ್ಲಿ ಎಂ95 ಮಾಸ್ಕ್ ಗೆ ಬೇಡಿಕೆ ಕುದುರಿದ್ದು, ಕೆಲವೆಡೆ ಮಾಸ್ಕ್ ಅಲಭ್ಯತೆಯೂ ಉಂಟಾಗಿದೆ.

Advertisement

ಪ್ರತಿ ಮಾಸ್ಕ್ಗೆ 200 ರೂ. ಮೇಲ್ಪಟ್ಟು ಬೆಲೆ ಇದೆ ಎಂದು ಮಂಗಳೂರಿನ ಕೆಲವು ಮೆಡಿಕಲ್‌ ಶಾಪ್‌ಗ್ಳ ಪ್ರಮುಖರು ತಿಳಿಸಿದ್ದಾರೆ. ಬೇಡಿಕೆ ಕುದುರಿದ್ದ ರಿಂದ ಮಾಸ್ಕ್ ಬೆಲೆಯನ್ನು ಕೆಲವು ಕಡೆ ಏಕಾಏಕಿ ಏರಿಸಿರುವ ಬಗ್ಗೆಯೂ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿವೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಕೆಲವು ಔದ್ಯೋಗಿಕ ಸಂಸ್ಥೆಗಳಲ್ಲಿ ಬುಧವಾರ ಉದ್ಯೋಗಿ ಗಳು ಮಾಸ್ಕ್ ಧರಿಸಿಯೇ ಕೆಲಸ ಮಾಡಿದರು.

ಭಾರತದಲ್ಲಿ ಕೇರಳ ಮೂಲದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಜಿಲ್ಲಾ ಸರಕಾರಿ ವೆನಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ವಿಶೇಷ ಐಸೋಲೇಟೆಡ್‌ ವಾರ್ಡ್‌ ತೆರೆಯಲಾಗಿದೆ. ವಿಮಾನ ನಿಲ್ದಾಣ, ನವಮಂಗಳೂರು ಬಂದರಿನಲ್ಲಿ ವಿಶೇಷ ತಪಾಸಣಾ ಕಾರ್ಯ ಮುಂದುವರಿಯುತ್ತಿದೆ.

ಕುವೈಟ್‌ ತೆರಳಲು ಮೆಡಿಕಲ್‌ ಸರ್ಟಿಫಿಕೆಟ್‌
ಕೊರೊನಾ ಜಗತ್ತಿನಾದ್ಯಂತ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಇತರ ದೇಶಗಳ ನಾಗರಿಕರಿಗೂ ಕಟ್ಟುನಿಟ್ಟಿನ ನಿಯಮ ಹೇರಲಾಗಿದೆ. ಮಾ. 8ರ ಬಳಿಕ ವೈದ್ಯಕೀಯ ಪ್ರಮಾಣಪತ್ರ ತೋರಿಸಿದ ಬಳಿಕವಷ್ಟೇ ಕುವೈಟ್‌ ರಾಷ್ಟ್ರ ಪ್ರವೇಶಿಸಲು ಅನುಮತಿ ನೀಡುವ ಬಗ್ಗೆ ಕುವೈಟ್‌ನ ನಾಗರಿಕ ವಿಮಾನಯಾನ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಭಾರತ, ಫಿಲಿಫೈನ್ಸ್‌, ಬಾಂಗ್ಲಾದೇಶ, ಈಜಿಪ್ಟ್, ಸಿರಿಯಾ, ಜಾರ್ಜಿಯಾ ಮತ್ತು ಲೆಬನಾನ್‌ನಿಂದ ಕುವೈಟ್‌ಗೆ ಪ್ರಯಾಣ ಬೆಳೆಸುವವರಿಗೆ ಈ ನಿಯಮ ಅನ್ವಯವಾಗಲಿದೆ. ಇದರಿಂದ ಕುವೈಟ್‌ನಲ್ಲಿ ಕೆಲಸ ಮಾಡುತ್ತಿರುವ ಸದ್ಯ ಊರಿಗೆ ಬಂದಿರುವ ಕರಾವಳಿಗರು ಕಂಗಾಲಾಗಿದ್ದಾರೆ. ಕುವೈಟ್‌ ರಾಯಭಾರ ಕಚೇರಿಯಿಂದ ಅನುಮೋದಿಸಲ್ಪಟ್ಟ ಆರೋಗ್ಯ ಕೇಂದ್ರಗಳಿಂದಲೇ ಪ್ರಮಾಣಪತ್ರ ಪಡೆಯಬೇಕಿದೆ. ಇದಕ್ಕೆ ಒಂದು ವಾರ ಕಾಲಾವಕಾಶ ಅಗತ್ಯ. ಕುವೈಟ್‌ಗೆ ತತ್‌ಕ್ಷಣವೇ ತೆರಳಬೇಕಾದವರಿಗೆ ಈ ನಿಯಮದಿಂದಾಗಿ ಸಮಸ್ಯೆ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next