Advertisement

ಭೂಮಿ ಹಕ್ಕು ಪತ್ರಕ್ಕಾಗಿ ಆಗ್ರಹ

07:25 AM Feb 22, 2019 | Team Udayavani |

ರಾಮನಗರ: ಹಲವು ದಶಕಗಳಿಂದ ವಾಸಿಸುತ್ತಿರುವ ಭೂಮಿಗೆ ಹಕ್ಕು ಪತ್ರಗಳನ್ನು ಕೊಡುವಂತೆ ಒತ್ತಾಯಿಸಿ ತಾಲೂಕಿನ ಅಚ್ಚಲುದೊಡ್ಡಿಯ ಗ್ರಾಮದ ನಿವಾಸಿಗಳು ರಾಮನಗರ- ಕನಕಪುರ ಹೆದ್ದಾರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

Advertisement

ಅಚ್ಚಲುದೊಡ್ಡಿಯ ಮೂಲ ನಿವಾಸಿಗಳು ತಾವು, ದೊಡ್ಡಿಯ ಕಲ್ಲುಬಂಡೆಗಳ ಮೇಲೆ ತಾವು ಮತ್ತು ಹಿರಿಯರು ಹಲವು ದಶಕಗಳಿಂದ ವಾಸಿಸುತ್ತಿರುವುದಾಗಿ, ಹಕ್ಕುಪತ್ರ ಇಲ್ಲದ ಕಾರಣ ಖಾತೆ ಮಾಡಿಕೊಳ್ಳಲೂ ಆಗದೆ, ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡರು. ಹಕ್ಕುಪತ್ರಕ್ಕಾಗಿ ಅಥವಾ ಪುನರ್ವಸತಿಗಾಗಿ ಮನವಿ ಸಲ್ಲಿಸುತ್ತಿದ್ದರೂ ಅಧಿಕಾರಿಗಳು, ಚುನಯಿತ ಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ನಿವೇಶನ ತಕರಾರರು: ಈ ಮಧ್ಯೆ ತಾಲೂಕು ಆಡಳಿತ ಸರ್ವೆ ನಂ.57ರ 2 ಎಕರೆ ಜಮೀನನ್ನು ಆಶ್ರಯ ನಿವೇಶನಕ್ಕಾಗಿ ಸ್ಥಳ ಗುರುತಿಸಿದೆ. ಅಲ್ಲಿ ತಮಗೆ ನಿವೇಶನಗಳನ್ನು ಕೊಡುವ ನಿರೀಕ್ಷೆ ಇತ್ತು. ಗುರುವಾರ ಕಂದಾಯ ಅಧಿಕಾರಿಗಳೊಂದಿಗೆ ಬಂದ ಸರ್ವೆ ಅಧಿಕಾರಿಗಳು ಸರ್ವೆ ಸಂಖ್ಯೆ 57ನ್ನು ಅಳತೆ ಮಾಡಲು ಮುಂದಾದಾಗ ಕೆಲವು ಖಾಸಗಿ ವ್ಯಕ್ತಿಗಳು ಅದು ತಮಗೆ ಸೇರಿದ ಆಸ್ತಿ, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಸರ್ವೆ ಕಾರ್ಯಕ್ಕೆ ತಡೆವೊಡ್ಡಿದ್ದಾರೆ ಎಂದು ಪ್ರತಿಭಟನಾಕರರು ಆರೋಪಿಸಿದರು.

ಅಧಿಕಾರಿಗಳು ತಮಗಾಗಿ ಭೂಮಿ ಗುರುತಿಸಿದ್ದಾರೆ ಎಂದು ತಾವು ಭಾವಿಸಿದ್ದಾಗಿ, ಆದರೆ ಇದು ಅಧಿಕಾರಿಗಳ ಕಣ್ಣೋರೆಸುವ ತಂತ್ರ ಎಂದು ಗೊತ್ತಾಗಿದೆ. ಬಡ ಕುಟುಂಬಗಳಾದ ತಮಗೆ ಅನ್ಯಾಯವಾಗುತ್ತಲೇ ಇದೆ. ಬೇರೆ ಜಮೀನು ಗುರುತಿಸಿ ನಿವೇಶನ ಕೊಡಿ ಎಂದು ಒತ್ತಾಯಿಸಿದರು. 

3 ಗಂಟೆಗಳ ಕಾಲ ರಸ್ತೆ ತಡೆ: ಸುಮಾರು 3 ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದರಿಂದ ರಸ್ತೆಯ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರು ಮಧ್ಯಪ್ರವೇಶಿಸಿ ಮನವೊಲಿಸಲು ಯತ್ನಿಸಿದರು. ಪ್ರತಿಭಟನಾಕಾರರು ತಹಶೀಲ್ದಾರರು ಸ್ಥಳಕ್ಕೆ ಬರುವ ತನಕ ಪ್ರತಿಭಟನೆ ಕೈಬಿಡೋಲ್ಲ ಎಂದು ಹಠ ಹಿಡಿದರು. ಕೊನೆಗೆ ಗ್ರಾಮಸ್ಥರೇ ತಹಶೀಲ್ದಾರ್‌ ಕಚೇರಿಗೆ ಹೋಗಿ ಮನವಿ ಸಲ್ಲಿಸಿ ಎಂದು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾದರು.

Advertisement

ತಹಶೀಲ್ದಾರ್‌ ಕಚೇರಿ ಮುಂಭಾಗವೂ ಪ್ರತಿಭಟನೆ: ನಗರದ ಮಿನಿ ವಿಧಾನಸೌಧದ ಮುಂಭಾಗ ಜಮಾಯಿಸಿ ಗ್ರಾಮಸ್ಥರು ಅಲ್ಲೂ ಪ್ರತಿಭಟನೆ ಮುಂದುವರಿಸಿದರು. ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜ್‌, ತಹಶೀಲ್ದಾರ್‌ ಎಸ್‌.ಕೆ.ರಾಜು ಪ್ರತಿಭಟನಾಕಾರರ ಮನವಿ ಆಲಿಸಿದರು. ಈ ವೇಳೆ ಮಾತನಾಡಿದ ತಹಶೀಲ್ದಾರರು, ಸರ್ವೆ ಕಾರ್ಯಕ್ಕೆ ಹೋಗಿದ್ದ ವೇಳೆ ಸ್ಥಳ ವಿವಾದ ಇರುವುದು ಗೊತ್ತಾಗಿದೆ.

ಕಾನೂನಾತ್ಮಕವಾಗಿ ಇರುವ ಸಮಸ್ಯೆಗಳ ಪರಿಹಾರಕ್ಕೆ ಕಾಲಾವಕಾಶ ಬೇಕು. ಇನ್ನೊಂದು ವಾರದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು. ತಹಶೀಲ್ದಾರರ ಭರವಸೆಯ ನಂತರ ಅಚ್ಚಲುದೊಡ್ಡಿ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಪುಟ್ಟಸ್ವಾಮಿ, ಪ್ರಮುಖರಾದ ನಾರಾಯಣ, ಗುರುವಮ್ಮ, ಶಂಕರ್‌ ಭಾಗ್ಯಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next