Advertisement

ಪ್ರಣಾಳಿಕೆಯಲ್ಲಿ ಕರಾವಳಿಯ ರೈಲ್ವೇ ಸೌಕರ್ಯ ಸೇರ್ಪಡೆಗೆ ಆಗ್ರಹ

12:54 AM Apr 03, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಣಾಳಿಕೆಯಲ್ಲಿ ಈ ಭಾಗದ ರೈಲ್ವೇ ಮೂಲಸೌಕರ್ಯಗಳ ಅಭಿವೃದ್ಧಿ ವಿಷಯಗಳನ್ನು ಸೇರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ಚುನಾವಣ ಸಮಿತಿಗೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯು ಮನವಿ ಸಲ್ಲಿಸಿದೆ.

Advertisement

ಮಂಗಳೂರು-ಉಡುಪಿ ನಗರಗಳ ಮಧ್ಯೆ ಮೆಟ್ರೋ ರೈಲ್ವೇ ನಿರ್ಮಾಣ ಮಾಡಬೇಕು. ಮಂಗಳೂರಿನಿಂದ ಬೆಂಗಳೂರಿಗೆ ಪರ್ಯಾಯ ರೈಲು ಮಾರ್ಗವಾದ ಮಂಗಳೂರು-ಹೊನ್ನಾವರ-ತಾಳಗುಪ್ಪ-ಶಿವಮೊಗ್ಗ ಹೊಸ ರೈಲು ಮಾರ್ಗವನ್ನು ನಿರ್ಮಿಸಬೇಕು. ಮಂಗಳೂರು-ತೋಕೂರು ರೈಲ್ವೇ ಭಾಗವನ್ನು ಪಾಲಕ್ಕಾಡ್‌ ರೈಲ್ವೇ ವಿಭಾಗದಿಂದ ಪ್ರತ್ಯೇಕಿಸಿ ಮೈಸೂರು ರೈಲ್ವೇ ವಿಭಾಗಕ್ಕೆ ಸೇರಿಸುವ ಬಗ್ಗೆ ನಿತೀಶ್‌ ಕುಮಾರ್‌ ರೈಲ್ವೇ ಸಚಿವರಾಗಿದ್ದಾಗ ಘೋಷಿಸಿದ್ದರು. ಅನಂತರ ರೈಲ್ವೇ ಮಂಡಳಿಯು 2004ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶದ ಅನುಷ್ಠಾನ ಆಗಿಲ್ಲ. ಇದನ್ನು ಅನುಷ್ಠಾನಿಸಬೇಕು ಎಂದು ಒತ್ತಾಯಿಸಲಾಗಿದೆ.

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೇ ಇಲಾಖೆಯೊಂದಿಗೆ ವಿಲೀನಗೊಳಿಸಬೇಕು. ಕೊಂಕಣ ರೈಲ್ವೆಯು ಶೇ. 40 ಹೆಚ್ಚುವರಿಯಾಗಿ ವಿಧಿಸುವ ಪ್ರಯಾಣ ದರವನ್ನು ರದ್ದುಗೊಳಿಸಬೇಕು ಹಾಗೂ ಹಾಲಿ ಎಕ್ಸ್‌ಪ್ರೆಸ್‌ ರೈಲು ದರದಲ್ಲಿ ಓಡಾಟ ನಡೆಸುತ್ತಿರುವ ಮಂಗಳೂರು-ಮಡ್‌ಗಾಂವ್‌ ಪ್ಯಾಸೆಂಜರ್‌ ಹಾಗೂ ಮೆಮು ರೈಲುಗಳನ್ನು ಪ್ಯಾಸೆಂಜರ್‌ ರೈಲುಗಳನ್ನಾಗಿ ಪರಿವರ್ತನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ವಿಶ್ವದರ್ಜೆ ಮಟ್ಟಕ್ಕೆ ಏರಿಸಲು ಕ್ರಮ, ಸುಬ್ರಹ್ಮಣ್ಯ, ಕಬಕ ಪುತ್ತೂರು, ಕಾಣಿಯೂರು, ಎಡಮಂಗಲ ಸುರತ್ಕಲ್‌ ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಬೇಕು, ಮಂಗಳೂರು ಸೆಂಟ್ರಲ್‌-ಜಂಕ್ಷನ್‌ ರೈಲು ಮಾರ್ಗವನ್ನು ದ್ವಿಪಥಗೊಳಿಸಬೇಕು ಸಹಿತ ವಿವಿಧ ಬೇಡಿಕೆಯ ವಿಷಯವನ್ನು ಪ್ರಣಾಳಿಕೆಯಲ್ಲಿ ಸೇರಿಸುವಂತೆ ಸಮಿತಿ ಅಧ್ಯಕ್ಷ ಹನುಮಂತ ಕಾಮತ್‌ ಉಭಯ ಪಕ್ಷಗಳನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next