Advertisement

ಮಹಿಶಾಳ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹ: ಕರ್ನಾಟಕ ಸೇರಲು ಮಹಾ ಕನ್ನಡಿಗರ ಧರಣಿ

05:19 PM Jul 24, 2023 | keerthan |

ವಿಜಯಪುರ: ಮಹಿಶಾಳ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದಿರುವ ಮಹಾರಾಷ್ಟ್ರದ ಕನ್ನಡ ಗ್ರಾಮಗಳ ಗಡಿನಾಡ ಕನ್ನಡಿಗರು, ಕರ್ನಾಟಕ ರಾಜ್ಯಕ್ಕೆ ಸೇರಲು ತಮಗೆ ಅನುಮತಿ ನೀಡುವಂತೆ ಆಗ್ರಹಿಸಿ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ನಡೆಸಿದ್ದಾರೆ.

Advertisement

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಸಂಖ ಹೋಬಳಿಯ ಉಪ ತಹಶೀಲ್ದಾರ ಕಛೇರಿ ಎದುರು ಚಕ್ರಿ ಆಂದೋಲನದ ಮೂಲಕ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಘೋಷಣೆ ಕೂಗುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿರುವ ಮಹಾರಾಷ್ಟ್ರದ 62 ಗ್ರಾಮಗಳ ಗಡಿನಾಡ ಕನ್ನಡಿಗರು, ಮಹಿಶಾಳ ಏತ ನೀರಾವರಿ ಯೋಜನೆ ಅನುಷ್ಠಾನ, ಬರಗಾಲ ಪರಿಹಾರ ಹಾಗೂ ಬರ ಕಾಮಗಾರಿ ಆರಂಭಿಸುವಂಥ ಹಕ್ಕೊತ್ತಾಯ ಮಂಡಿಸಿದ್ದಾರೆ.

ಕಳೆದ ಅರ್ಧ ಶತಮಾನಕ್ಕಿಂತ ಹಿಂದಿನಿಂದಲೂ ಮಹಿಶಾಳ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮಹಾರಾಷ್ಟ್ರ ರಾಜ್ಯದಲ್ಲಿರುವ ಕೃಷಿಯನ್ನೇ ನಂಬರಿವು ಕನ್ನಡ ಗ್ರಾಮಗಳ ಗಡಿ ಭಾಗದ ಕನ್ನಡಿಗ ರೈತರು ಹೋರಾಟ ಮಾಡುತ್ತಲೇ ಬರುತ್ತಿದ್ದೇವೆ. ಆದರೂ ಮಹಾರಾಷ್ಟ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಬದಲಾಗಿ ಗಡಿನಾಡ ಕನ್ನಡಿಗರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯಲ್ಲೇ ಜತ್ ಅತ್ಯಂತ ದೊಡ್ಡ ತಾಲೂಕಾಗಿದ್ದು, ಕನ್ನಡಿಗರೇ ವಾಸವಿರುವ 62 ಕನ್ನಡದ ಗ್ರಾಮಗಳ ಜನರ ಭಾವನೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ನೀರಾವರಿ ಯೋಜನೆ ಅನುಷ್ಠಾನದ ಮಾತಿರಲಿ ಕನಿಷ್ಟ ಕುಡಿಯುವ ನೀರು ಪೂರೈಸುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೂಡಲೇ ಕರ್ನಾಟಕ ಸರ್ಕಾರ ತನ್ನ ಗಡಿಯಲ್ಲಿ ರೂಪಿಸಿರುವ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯನ್ನು ಗಡಿನಾಡ ಕನ್ನಡ ಗ್ರಾಮಗಳಿಗೆ ವಿಸ್ತರಿಸಲು ಮುಂದಾಗಬೇಕು. ಮಹಿಶಾಳ ಯೋಜನೆಯನ್ನು 6 ತಿಂಗಳಲ್ಲಿ ಆರಂಭಿಸುವ ಕುರಿತು 2022 ರಲ್ಲಿ ಭರವಸೆ ನೀಡಿದ್ದ ಸಚಿವ ಉದಯ ಸಾವಂತ, ನಂತರ ಕೊಟ್ಟ ವಚನ ಪಾಲಿಸುವಲ್ಲಿ ವಿಫಲವಾಗಿದ್ದಾರೆ ಎಂದು ಕಿಡಿ ಕಾರಿದರು.

ನಿರಂತರ ಬರ ಪೀಡಿತವಾಗುತ್ತಿರುವ ಕರ್ನಾಟಕದ ಗಡಿಯಲ್ಲಿ ಗ್ರಾಮಗಳಲ್ಲಿ ಬರ ಕಾಮಗಾರಿ ಆರಂಭಿಸಿ, ಉದ್ಯೋಗ ಕೊಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಬರ ಪರಿಸ್ಥಿತಿ ಸಂದರ್ಭದಲ್ಲಿ ಕನ್ನಡಿಗರೆಂಬ ಕಾರಣಕ್ಕೆ ಬೆಳೆ ಹಾನಿ ಪರಿಹಾರವನ್ನೂ ನೀಡುವುದಿಲ್ಲ. ಕನಿಷ್ಟ ಜಾನುವಾರಿಗಳಿಗಾದರೂ ಮೇವು-ನೀರು ಒದಗಿಸದೇ ಅನ್ಯಾಯ ಮಾಡುತ್ತಿದೆ ಎಂದು ಗಡಿನಾಡ ಕನ್ನಡಿಗರು ತಮ್ಮ ಮೇಲೆ ನಡೆಯುತ್ತಿರುವ ನಿರ್ಲಕ್ಷದ ದೌರ್ಜನ್ಯದ ವಿರುದ್ಧ ಕಿಡಿಕಾರಿದರು.

ಪ್ರಸಕ್ತ ವರ್ಷ ಮುಂಗಾರು ವಿಫಲವಾಗಿದ್ದು, ಕುಡಿಯುವ ನೀರಿಗೂ ತತ್ವಾರ ಇದೆ. ಜಾನುವಾರುಗಳಿಗೆ ಮೇವು-ನೀರು ಹೊಂದಿಸುವುದೇ ಸಮಸ್ಯೆಯಾಗಿದೆ. ದುಡಿಮೆ ಇಲ್ಲದೇ ಕೃಷಿಕರು ಹಾಗೂ ಕೃಷಿ ಅವಲಂಬಿತರು ಕಂಗಾಲಾಗಿದ್ದರೂ ಬರಗಾಲ ಕಾಮಗಾರಿ ಆರಂಭಿಸದೇ ಶೋಷಣೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ವಿಸ್ತಾರದಲ್ಲಿ ಸಾಂಗ್ಲಿ ಜಿಲ್ಲೆಯಲ್ಲಿ ಜತ್ ಬಹು ದೊಡ್ಡ ತಾಲೂಕಾಗಿದ್ದು, ಆಡಳಿತಾತ್ಮಕವಾಗಿ ಸಂಖ ಸೇರಿದಂತೆ ಮೂರು ಭಾಗವಾಗಿ ವಿಂಗಡಿಸಬೇಕು. ಮಹಿಶಾಳ ಏತ ನೀರಾವರಿ ರಾಜಕೀಯ ದಾಳವಾಗಿ ಬಳಕೆಯಾಗದೇ ಹೋರಾಟಗಾರ ಕನ್ನಡಿಗರ ವಾಸ್ತವಿಕ ಭಾವನೆ ಅರಿತು ಸ್ಪಂದಿಸಬೇಕು. ಇಲ್ಲವಾದಲ್ಲಿ ಕನ್ನಡದ 62 ಗ್ರಾಮಗಳನ್ನು ಕರ್ನಾಟಕಕ್ಕೆ ಸೇರ್ಪಡೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next