Advertisement

ಭ್ರಷ್ಟ ಸಚಿವರ ವಜಾಕ್ಕೆ ಆಗ್ರಹ

04:54 PM Aug 19, 2017 | |

ರಾಯಚೂರು: ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರ್ಕಾರದ ಸಚಿವರನ್ನು ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದ ಟಿಪ್ಪು ಸುಲ್ತಾನ್‌ ಉದ್ಯಾನವನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ವ್ಯಕ್ತಪಡಿಸಿದ ಕಾರ್ಯಕರ್ತರು ಅಲ್ಲಿಂದ ಡಿಸಿ ಕಚೇರಿವರೆಗೆ ರ್ಯಾಲಿ ನಡೆಸಿ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರದ ಸಚಿವರು ಒಂದಲ್ಲ ಒಂದು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಆದರೂ ಸಿಎಂ ಮಾತ್ರ ಏನು ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು. ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ 79 ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದರೂ ಮುಖ್ಯಮಂತ್ರಿ ಕ್ರಮಕ್ಕೆ ಮುಂದಾಗಿಲ್ಲ. ಬದಲಿಗೆ ಕೇಂದ್ರ ಸರ್ಕಾರದ ವಿರುದ್ಧವೇ ದ್ವೇಷ ರಾಜಕಾರಣದ ಆರೋಪ ಮಾಡಿ ಸಚಿವರ ನಡೆ ಸಮರ್ಥಿಸಿಕೊಂಡಿರುವುದು ಖಂಡನೀಯ ಎಂದರು. ಇಷ್ಟೆಲ್ಲ ಆದರೂ ಸಿಎಂ ಸಿದ್ದರಾಮಯ್ಯ ಮಾತ್ರ ನಮ್ಮ ಸರ್ಕಾರಕ್ಕೆ ಯಾವುದೇ ಕಳಂಕವಿಲ್ಲ ಎನ್ನುವ ಬಂಡತನ ಪ್ರದರ್ಶಿಸಿದರು. ನೋಟು ರದ್ದತಿ ವೇಳೆ ಸಚಿವ ರಮೇಶ ಜಾರಕಿಹೊಳಿ, ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ಹಾಗೂ ಎಂಎಲ್‌ಸಿ ಗೋವಿಂದರಾಜರ ಮನೆಯಲ್ಲಿ ಕೋಟ್ಯಂತರ ರೂ. ನಗದು, ಆಸ್ತಿ ಹಾಗೂ ಡೈರಿಗಳು ಪತ್ತೆಯಾಗಿದ್ದವು. ಆದರೂ ಮುಖ್ಯಮಂತ್ರಿ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ದೂರಿದರು. ಸರ್ಕಾರಿ ಅಧಿಕಾರಿಗಳಾದ ಜಯಚಂದ್ರ, ಚಿಕ್ಕರಾಯಪ್ಪ ಮೇಲೆ ದಾಳಿ ನಡೆದಾಗಲೂ ಕ್ರಮ ಕೈಗೊಳ್ಳದೆ ಪರೋಕ್ಷ ರಕ್ಷಣೆ ನೀಡಲಾಗಿತ್ತು. ರಾಜ್ಯದ ಲೋಕಾಯುಕ್ತ ಸಂಸ್ಥೆ ದುರ್ಬಲಗೊಳಿಸಿ ಎಸಿಬಿ ರಚಿಸುವ ಮೂಲಕ ಸಚಿವರಿಗೆ ಕ್ಲೀನ್‌ ಚಿಟ್‌ ಕೊಡಿಸಲಾಗುತ್ತಿದೆ. ರಾಜ್ಯದಲ್ಲಿ ಮರಳು ಮಾಫೀಯಾ ನಿಯಂತ್ರಿಸಲು ಮುಂದಾದ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಇದರಿಂದ ಅಧಿಕಾರಿಗಳು ಕೆಲಸ ಮಾಡಲು ಹಿಂಜರಿಯುವಂತಾಗಿದೆ ಎಂದು ದೂರಿದರು. ಇಂಥ ಭ್ರಷ್ಟ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು. ಇನ್ನಾದರೂ ಆರೋಪ ಹೊತ್ತ ಸಚಿವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ, ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಮಾಜಿ ಶಾಸಕ ಎ. ಪಾಪಾರೆಡ್ಡಿ, ನಗರಸಭೆ ಸದಸ್ಯ ದೊಡ್ಡ ಮಲ್ಲೇಶ, ಮಹಾಲಿಂಗ ರಾಂಪುರ, ಮುಖಂಡರಾದ ತ್ರಿವಿಕ್ರಮ ಜೋಶಿ, ರಾಜಕುಮಾರ, ಅಮರೇಗೌಡ, ಅಶೋಕಗಸ್ತಿ, ಪಿ. ಶ್ರೀನಿವಾಸರೆಡ್ಡಿ, ಶಶಿರಾಜ ಮಸ್ಕಿ, ರಾಘವೇಂದ್ರ, ಪ್ರಾಣೇಶ ದೇಶಪಾಂಡೆ, ಬಂಗಿ ನರಸರೆಡ್ಡಿ, ಬಂಡೇಶ ವಲ್ಕಂದಿನ್ನಿ, ತಿರುಮಲರೆಡ್ಡಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next