ಧಾರವಾಡ: ಮನವಿ ಸಲ್ಲಿಸಲು ಬಂದವರನ್ನು ನಿಂದಿಸಿದ್ದಲ್ಲದೇ ಅವರ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪಾಲಿಕೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರ ಕ್ರಮ ಖಂಡಿಸಿ ಧಾರವಾಡ ವಕೀಲರ ಸಂಘದ ನೇತೃತ್ವದಲ್ಲಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ವಕೀಲರು, ನಗರದ ಪಾಲಿಕೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯ ವಕೀಲರಾದ ಸಂತೋಷ ನರಗುಂದ ಹಾಗೂ ಸಂಗಡಿಗರು ಹುಬ್ಬಳ್ಳಿಯ ಈಜುಕೊಳದ ಬಾಗಿಲು ತಗೆಯುವಂತೆ ಒತ್ತಾಯಿಸಿ ಮನವಿ ಸಲ್ಲಿಸಿಲು ಹೋದಾಗ ಪಾಲಿಕೆ ಆಯುಕ್ತರು ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಅಲ್ಲದೇ ವಕೀಲರ ವಿರುದ್ಧವೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.
ಹೀಗಾಗಿ ಈ ಕೂಡಲೆ ಅವರನ್ನು ಬಂ ಧಿಸಿ ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ದೇಶದ ಗಡಿಯಲ್ಲಿ ನಡೆದುಕೊಳ್ಳುವಂತೆ ಅವರು ಇಲ್ಲಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಇಲ್ಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗಿರುತ್ತದೆ ಎಂಬುದನ್ನು ಆಯುಕ್ತರು ತಿಳಿದುಕೊಳ್ಳಬೇಕು.
ಅಧಿಕಾರಿಗೆ ಇರಬೇಕಾದ ತಾಳ್ಮೆ ಅವರಿಗೆ ಇಲ್ಲ. ಹೀಗಾಗಿ ಸರಕಾರ ಅವರನ್ನು ಕೂಡಲೆ ಸೇವೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್.ಯು. ಬೆಳ್ಳಕ್ಕಿ ಮಾತನಾಡಿ, ಸಾರ್ವಜನಿಕರ ಸಮಸ್ಯೆ ಆಲಿಸಬೇಕಾದದ್ದು ಅಧಿಕಾರಿಯ ಪ್ರಮುಖ ಕರ್ತವ್ಯ.
ಅದಕ್ಕಾಗಿಯೇ ಅವರಿಗೆ ಪಾಲಿಕೆ ನೀಡಿರುವ ಮನೆಯಲ್ಲಿ ಒಂದು ಗೃಹ ಕಚೇರಿ ನಿರ್ಮಿಸಿ ಸರಕಾರ ಹಣ ನೀಡುತ್ತದೆ. ಆದರೆ, ಹುಬ್ಬಳ್ಳಿಯ ವಕೀಲ ಸಂತೋಷ ನರಗುಂದ ಹಾಗೂ ಸಂಗಡಿಗರು ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರ ಗೃಹ ಕಚೇರಿಗೆ ತೆರಳಿದಾಗ ಬಾಯಿಗೆ ಬಂದ ಹಾಗೆ ಮಾತನಾಡಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಸಂತೋಷ ಹಾಗೂ ಇನ್ನೊಬ್ಬನನ್ನು ಬಂಧಿಸಿ ಅವರ ಮೊಬೈಲನ್ನು ಕಸಿದುಕೊಂಡು ನಾಲ್ಕು ತಾಸು ಊಟ, ನೀರು ಕೊಡದೆ ಸತಾಯಿಸಿದ್ದಾರೆ ಎಂದು ದೂರಿದರು. ಹನುಮಂತ ಕಾಣಿಕೊಪ್ಪ, ರೂಪಾ ಕೆಂಗಾನವರ ಸೇರಿದಂತೆ ನೂರಾರು ವಕೀಲರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಪಾಲಿಕೆಯ ಗೇಟ್ ಬಳಿ ತಡೆಹಿಡಿದರು. ಇದರಿಂದ ಕೆರಳಿದ ಪ್ರತಿಭಟನಾಕಾರರು, ಕೆಲ ಹೊತ್ತು ರಸ್ತೆ ತಡೆ ಕೂಡ ನಡೆಸಿದರು. ಈ ವೇಳೆ ಪೊಲೀಸ್ ಅ ಧಿಕಾರಿಗಳು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.