Advertisement

ಡಯಾಲಿಸಿಸ್‌ಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದೆ ಬೇಡಿಕೆ

02:55 AM Sep 26, 2018 | Karthik A |

ಉಡುಪಿ: ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆ ಮತ್ತು ಕುಂದಾಪುರ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲಿದ್ದು ಡಯಾಲಿಸಿಸ್‌ಗೆ ಹೆಸರು ನೋಂದಾಯಿಸಿಕೊಳ್ಳಲು ಹತ್ತಾರು ಮಂದಿ ಸರದಿಯಲ್ಲಿ ಕಾಯುವಂತಾಗಿದೆ.

Advertisement

ಸ್ಥಳಾವಕಾಶ ಕೊರತೆ  
ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಸರಕಾರದ ನಿಯಮ ಪ್ರಕಾರ 10 ಡಯಾಲಿಸಿಸ್‌ ಯಂತ್ರಗಳಿರಬೇಕಿತ್ತು. ಆದರೆ 9 ಮಾತ್ರ ಇವೆ. ಸ್ಥಳಾವಕಾಶದ ಕೊರತೆಯಿಂದ ಒಂದು ಯಂತ್ರ ಅಳವಡಿಸಿರಲಿಲ್ಲ. ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 3 ಮೆಷಿನ್‌ಗಳಿವೆ. ಆದರೆ ಮತ್ತೆರಡು ಮೆಷಿನ್‌ಗಳ ಅಗತ್ಯವಿದೆ. ಆದರೆ ಇಲ್ಲಿಯೂ ಸ್ಥಳಾವಕಾಶದ ಸಮಸ್ಯೆ ಇದೆ. ಕಾರ್ಕಳದಲ್ಲಿ ನೂತನ ತಾಲೂಕು ಆಸ್ಪತ್ರೆ ನಿರ್ಮಾಣ ಕಾರ್ಯ ಪೂರ್ಣಗೊಂಡ ಅನಂತರವಷ್ಟೇ ಡಯಾಲಿಸಿಸ್‌ ಯಂತ್ರ ಲಭ್ಯವಾಗಲಿದೆ.

ಭಾರೀ ಬೇಡಿಕೆ
ಉಡುಪಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದೇ ಶಿವಮೊಗ್ಗ, ಶೃಂಗೇರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಯವರು ಬರುತ್ತಿದ್ದಾರೆ. ಈ ಹಿಂದೆ ದಿನಕ್ಕೆ 500ರಷ್ಟು ಮಂದಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಈಗ ಆ ಸಂಖ್ಯೆ 1,000ದಷ್ಟಿದೆ. ಇದರ ಜತೆಗೆ ಡಯಾಲಿಸಿಸ್‌ಗೂ ಭಟ್ಕಳ, ಬೈಂದೂರು ಮಾತ್ರವಲ್ಲದೆ ಹೊರ ಜಿಲ್ಲೆಯವರೂ ಬರುತ್ತಿದ್ದಾರೆ. ಇಲ್ಲಿ ಕಳೆದ ತಿಂಗಳು 554 ಸೈಕಲ್‌ ಡಯಾಲಿಸಿಸ್‌ ಮಾಡಲಾಗಿದೆ. ಒಬ್ಬರಿಗೆ ಒಮ್ಮೆ ಡಯಾಲಿಸಿಸ್‌ ಮಾಡುವುದಕ್ಕೆ ಸುಮಾರು 4 ತಾಸುಗಳು ಬೇಕು. ಈ ನಾಲ್ಕು ತಾಸುಗಳನ್ನು ಒಂದು ಸೈಕಲ್‌ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಕಿಡ್ನಿ ವೈಫ‌ಲ್ಯವಾದ ಒಬ್ಬ ರೋಗಿಗೆ ವಾರಕ್ಕೆ ಎರಡು-ಮೂರು ಬಾರಿ ಡಯಾಲಿಸಿಸ್‌ ಬೇಕಾಗುತ್ತದೆ ಮತ್ತು ಇದು ನಿರಂತರ. 

ರೋಗಿಯನ್ನು (ತುರ್ತು ಸಂದರ್ಭ ಹೊರತು ಪಡಿಸಿ) ಡಯಾಲಿಸಿಸ್‌ಗೆ ಒಳಪಡಿಸುವಾಗ ಮುಂದಿನ ಬಾರಿ (2-3 ದಿನ ಬಿಟ್ಟು) ಡಯಾಲಿಸಿಸ್‌ಗೆ ಒಳಪಡಿಸುವ ದಿನಾಂಕವನ್ನು ಕೂಡ ನಿಗದಿಪಡಿಸಲೇಬೇಕು. ಅರ್ಧದಲ್ಲಿ ನಿಲ್ಲಿಸಲಾಗದು. ಆ ರೀತಿ ಮಾಡಲು ಅಷ್ಟು ಯಂತ್ರಗಳ ಸೌಲಭ್ಯಗಳಿಲ್ಲ. ಹಾಗಾಗಿ ಕೆಲವರು ಇನ್ನೂ ಕೂಡ ಡಯಾಲಿಸಿಸ್‌ ಆರಂಭಕ್ಕೆ ಕಾಯುತ್ತಿದ್ದಾರೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 15ಕ್ಕೂ ಅಧಿಕ ಮಂದಿ ಇಂತಹ ಲಿಸ್ಟ್‌ನಲ್ಲಿದ್ದಾರೆ.

ಶಿಫ್ಟ್ ಸಂಖ್ಯೆ ಹೆಚ್ಚಳ
ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಎರಡು ಶಿಫ್ಟ್ಗಳಲ್ಲಿ ಡಯಾಲಿಸಿಸ್‌ ನಡೆಯುತ್ತಿತ್ತು. ಈಗ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಮೂರು ಶಿಫ್ಟ್ಗಳಲ್ಲಿ ಡಯಾಲಿಸಿಸ್‌ ನಡೆಯುತ್ತಿದೆ. ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಕೂಡ ಮೂರು ಶಿಫ್ಟ್
ಗಳಲ್ಲಿ ಡಯಾಲಿಸಿಸ್‌ ನಡೆಯುತ್ತಿದೆ. ಎಪಿಎಲ್‌ ಸೇರಿದಂತೆ ಎಲ್ಲರಿಗೂ ಡಯಾಲಿಸಿಸ್‌ ಉಚಿತವಾಗಿದೆ.

Advertisement

ಒತ್ತಡ ಬೇಡ, ಯಂತ್ರಬೇಕು
ಜಿಲ್ಲಾಸ್ಪತ್ರೆಯಲ್ಲಿ ಇರುವ ಡಯಾಲಿಸಿಸ್‌ ಯಂತ್ರಗಳು ಸಾಲದು. ಇರುವ ಮೆಷಿನ್‌ಗಳಲ್ಲೇ ನಮ್ಮವರಿಗೆ ಡಯಾಲಿಸಿಸ್‌ ಮಾಡಿ..ನಮ್ಮವರಿಗೆ ಮಾಡಿ..ಎಂದು ರಾಜಕಾರಣಿಗಳು, ಅಧಿಕಾರಿಗಳು ವೈದ್ಯರಿಗೆ ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಡಯಾಲಿಸಿಸ್‌ ನಡೆಸುವುದು ಕಷ್ಟಕರವಾಗಿದೆ. ಒತ್ತಡ ಹಾಕುವುದಕ್ಕಿಂತ ಶೀಘ್ರವಾಗಿ ಮತ್ತಷ್ಟು ಡಯಾಲಿಸಿಸ್‌ ಯಂತ್ರಗಳನ್ನು ಒದಗಿಸಲು ಗಮನಕೊಡಲಿ.
– ಗೀತಾ ರವಿ ಶೇಟ್‌, ಸಾಮಾಜಿಕ ಸೇವಾ ಕಾರ್ಯಕರ್ತರು 

ಪ್ರತ್ಯೇಕ ಮೆಷಿನ್‌ ಬೇಕು
ಈಗ ಇರುವ ಡಯಾಲಿಸಿಸ್‌ ಯಂತ್ರಗಳಿಗೆ ಈಗಾಗಲೇ ರೋಗಿಗಳ ಹೆಸರು ಬುಕ್‌ ಆಗಿದೆ. ಹಾಗಾಗಿ ಹಾವು ಕಡಿತ, ಜ್ವರ ಮೊದಲಾದ ತುರ್ತು ಸಂದರ್ಭದಲ್ಲಿ ಡಯಾಲಿಸಿಸ್‌ನ ಅಗತ್ಯ ಬಿದ್ದಾಗ ಡಯಾಲಿಸಿಸ್‌ ಮಾಡಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಇಂತಹ ಸಂದರ್ಭಗಳಿಗೆಂದೇ ಹೆಚ್ಚುವರಿ ಡಯಾಲಿಸಿಸ್‌ ಯಂತ್ರಗಳನ್ನು ಮೀಸಲಿಡಬೇಕು. ಇತ್ತೀಚಿನ ದಿನಗಳಲ್ಲಿ ಡಯಾಲಿಸಿಸ್‌ಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಸರಕಾರ ಗಮನಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು.
– ವಿಶು ಶೆಟ್ಟಿ ಅಂಬಲಪಾಡಿ, ಸಮಾಜ ಸೇವಕರು, ಉಡುಪಿ 

ಮತ್ತೂಂದು ಯಂತ್ರ ಶೀಘ್ರ ಕಾರ್ಯಾರಂಭ 
ಜಿಲ್ಲಾಸ್ಪತ್ರೆಯಲ್ಲಿ 9 ಡಯಾಲಿಸಿಸ್‌ ಯಂತ್ರಗಳು ಕಾರ್ಯನಿರತವಾಗಿವೆ. ಇನ್ನೂ ಒಂದು ಡಯಾಲಿಸಿಸ್‌ ಯಂತ್ರ ಈ ತಿಂಗಳಾಂತ್ಯದೊಳಗೆ ಕಾರ್ಯನಿರ್ವಹಿಸಲಿದೆ. ಆದರೂ ಬೇಡಿಕೆ ಹೆಚ್ಚೇ ಇದೆ. ಸ್ಥಳಾವಕಾಶದ ಕೊರತೆ ಇದೆ. ತುರ್ತು ಸಂದರ್ಭದಲ್ಲಿ ಸೇವೆ ಒದಗಿಸಲು ಡಯಾಲಿಸಿಸ್‌ನ ಕೊರತೆ ಇಲ್ಲ.
-ಡಾ| ಮಧುಸೂದನ ನಾಯಕ್‌, ಜಿಲ್ಲಾ ಸರ್ಜನ್‌, ಉಡುಪಿ

— ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next