ಬೆಂಗಳೂರು: ಐದು ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ರಾಜ್ಯ ಸರಕಾರ ಮುಂದಾದ ಬೆನ್ನಲ್ಲೇ ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದು, ಈ ಅವೈಜ್ಞಾನಿಕ ಪರೀಕ್ಷೆ ರದ್ದುಪಡಿಸುವಂತೆ ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಬಿ.ಎನ್.ಯೋಗಾನಂದ ಮಾತನಾಡಿ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮಾತ್ರ ಪಬ್ಲಿಕ್ ಪರೀಕ್ಷೆ ನಡೆಸುತ್ತಿರುವುದರಿಂದ ಮಕ್ಕಳಲ್ಲೇ ತಾರತಮ್ಯ ಉಂಟಾಗುತ್ತದೆ ಎಂದು ತಿಳಿಸಿದರು.
ಕಲಿಕಾ ಚೇತರಿಕೆ ಮೂಲಕ ಬೋಧಿಸಿರುವ ಪಠ್ಯಕ್ರಮ ಹಾಗೂ ಖಾಸಗಿ ಶಾಲೆಗಳಲ್ಲಿ ಬೋಧನೆ ಮಾಡಿರುವ ಪಠ್ಯಕ್ರಮ ಬೇರೆಯಾಗಿದೆ. ಸರಕಾರ ಕಲಿಕಾ ಚೇತರಿಕೆ ಪಠ್ಯದ ಆಧಾರದಲ್ಲಿಯೇ ಪ್ರಶ್ನೆ ಪತ್ರಿಕೆ ತಯಾರಿಸುತ್ತಿದೆ. ಆದರೆ ಸರಕಾರಿ ಶಾಲಾ ಮಕ್ಕಳಿಗೆ ಮಾತ್ರ ಕಲಿಕಾ ಚೇತರಿಕೆ ಪಠ್ಯ ಬೋಧಿಸಲಾಗಿದೆ. ಇದರಿಂದ ಖಾಸಗಿ ಶಾಲಾ ಮಕ್ಕಳಿಗೆ ಅನ್ಯಾಯವಾಗಲಿದೆ ಎಂದರು.