Advertisement

ಗಂಗೊಳ್ಳಿಯಿಂದ ಬೈಂದೂರಿಗೆ ಬಸ್‌ ಸೇವೆಗಾಗಿ ಬೇಡಿಕೆ

05:46 PM Jun 26, 2022 | Team Udayavani |

ಗಂಗೊಳ್ಳಿ: ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಿಂದ ಬೈಂದೂರಿಗೆ ಬಸ್‌ ವ್ಯವಸ್ಥೆ ಇಲ್ಲ.

Advertisement

ಹೀಗಾಗಿ ಗಂಗೊಳ್ಳಿ-ಬೈಂದೂರು ನಡುವೆ ಕೆಎಸ್‌ ಆರ್‌ಟಿಸಿ ಬಸ್‌ ಸಂಚಾರ ಆರಂಭಿಸುವಂತೆ ಗಂಗೊಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತೊಂದರೆ

ಬೈಂದೂರಿನಿಂದ ಗಂಗೊಳ್ಳಿಯ ವಿವಿಧ ಶಾಲಾ ಕಾಲೇಜುಗಳಿಗೆ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಿದ್ದಾರೆ. ಮೀನುಗಾರರು, ಸಾರ್ವಜನಿಕರು, ಸರಕಾರಿ ಮತ್ತು ಖಾಸಗಿ ನೌಕರರು, ಉದ್ಯಮಿಗಳು ಅವರವರ ಕಾರ್ಯನಿಮಿತ್ತ ಗಂಗೊಳ್ಳಿಯಿಂದ ಬೈಂದೂರಿಗೆ ಪ್ರತಿನಿತ್ಯ ಸಂಚರಿಸುತ್ತಿದ್ದಾರೆ. ಆದರೆ ಗಂಗೊಳ್ಳಿಯಿಂದ ಬೈಂದೂರಿಗೆ ಮತ್ತು ಬೈಂದೂರಿನಿಂದ ಗಂಗೊಳ್ಳಿಗೆ ಯಾವುದೇ ಸರಕಾರಿ ಅಥವಾ ಖಾಸಗಿ ಬಸ್‌ ವ್ಯವಸ್ಥೆ ಇಲ್ಲ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಮೀನುಗಾರರು ಸಹಿತ ನೂರಾರು ಮಂದಿ ಸಕಾಲ ದಲ್ಲಿ ಗಂಗೊಳ್ಳಿಗೆ ಬರಲು ಮತ್ತು ಸಕಾಲದಲ್ಲಿ ಮನೆ ತಲುಪಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಸ್ಥಗಿತ

Advertisement

ಕೆಲವು ವರ್ಷಗಳ ಹಿಂದೆ ಗಂಗೊಳ್ಳಿ-ಬೈಂದೂರು ನಡುವೆ ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ.ಬೈಂದೂರಿನಿಂದ ಗಂಗೊಳ್ಳಿಗೆ ಬರಲು ಎರಡೆರಡು ಬಸ್‌ಗಳನ್ನು ಬದಲಾಯಿಸಿ ಬರಬೇಕಿದೆ.

ನೇರ ಬಸ್‌ ವ್ಯವಸ್ಥೆ ಕಲ್ಪಿಸಿ

ಬೈಂದೂರಿನಿಂದ ಬರುವಾಗ ತ್ರಾಸಿ ಜಂಕ್ಷನ್‌ನಲ್ಲಿ ಬಸ್‌ ಇಳಿಯಬೇಕಿದ್ದು, ರಾಷ್ಟ್ರೀಯ ಹೆದ್ದಾರಿ-66 ದಾಟಲು ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಜೀವ ಕೈಯಲ್ಲಿ ಹಿಡಿದು ದಾಟಬೇಕಾದ ಪರಿಸ್ಥಿತಿ ಇದೆ.

ರಸ್ತೆ ದಾಟುವ ಸಂದರ್ಭ ಅನೇಕ ಅಪಘಾತಗಳು ನಡೆದಿದ್ದು, ಹಲವರು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿದೆ. ಹೀಗಾಗಿ ಗಂಗೊಳ್ಳಿ-ಬೈಂದೂರು ನಡುವೆ ನೇರ ಬಸ್‌ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಓಡಾಟ

ಕುಂದಾಪುರ ಗಂಗೊಳ್ಳಿ ನಡುವೆ ಅನೇಕ ಖಾಸಗಿ ಬಸ್ಸುಗಳು ಓಡಾಡುತ್ತವೆ. ಅಂತೆಯೇ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗಳ ಓಡಾಟ ಇವೆ. ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಇದೇ ಮಾದರಿಯಲ್ಲಿ ಬೈಂದೂರಿಗೂ ಬಸ್‌ ಬೇಡಿಕೆ ಇಡಲಾಗಿದೆ.

ಗಂಗೊಳ್ಳಿ-ಬೈಂದೂರು ನಡುವೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸುವಂತೆ ಈಗಾಗಲೇ ಅನೇಕ ಶಾಲಾ ಕಾಲೇಜುಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಶಾಸಕರು ಹಾಗೂ ಇನ್ನಿತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಎಲ್ಲ ತೊಂದರೆಗಳನ್ನು ಪರಿಹರಿಸಲು ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳ ಅನುಕೂಲ ಕ್ಕಾಗಿ ಪ್ರತಿನಿತ್ಯ ಗಂಗೊಳ್ಳಿ-ಬೈಂದೂರು ನಡುವೆ ಕೆಎಸ್‌ಆರ್‌ಟಿಸಿ ಗ್ರಾಮೀಣ ಬಸ್‌ ಸಂಚಾರವನ್ನು ಪ್ರಾರಂಭಿಸಬೇಕೆಂದು ಮತ್ತು ಗಂಗೊಳ್ಳಿ-ಬೆ„ಂದೂರು ನಡುವೆ ಸಂಚಾರ ಸ್ಥಗಿತಗೊಳಿಸಿರುವ ಖಾಸಗಿ ಬಸ್‌ಗಳ ಪರವಾನಿಯನ್ನು ರದ್ದುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸರಕಾರಿ ಬಸ್‌ ಬರಲಿ; ಕಳೆದ ಕೆಲವು ವರ್ಷಗಳಿಂದ ಗಂಗೊಳ್ಳಿ- ಬೈಂದೂರು ನಡುವೆ ನೇರ ಬಸ್‌ ವ್ಯವಸ್ಥೆ ಇಲ್ಲ. ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್‌ಗಳು ಕೂಡ ಸಂಚಾರ ಸ್ಥಗಿತಗೊಳಿಸಿವೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಮೀನುಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿನಿತ್ಯ ಗಂಗೊಳ್ಳಿ-ಬೈಂದೂರು ನಡುವೆ ಕೆಎಸ್‌ಆರ್‌ಟಿಸಿ ಗ್ರಾಮೀಣ ಬಸ್‌ ಸಂಚಾರವನ್ನು ಪ್ರಾರಂಭಿಸಬೇಕು. – ಎಚ್‌.ಎಸ್‌. ಚಿಕ್ಕಯ್ಯ ಪೂಜಾರಿ, ಅಧ್ಯಕ್ಷರು, ನಾಗರಿಕ ಹೋರಾಟ ಸಮಿತಿ, ಗಂಗೊಳ್ಳಿ

ಪ್ರಸ್ತಾವನೆ ಇಲ್ಲ: ಗಂಗೊಳ್ಳಿ-ಬೈಂದೂರು ನಡುವೆ ಕೆಎಸ್‌ ಆರ್‌ಟಿಸಿ ಬಸ್‌ ಸಂಚಾರ ಆರಂಭಿಸುವ ಬಗ್ಗೆ ಯಾವುದೇ ಪ್ರಸ್ತಾವನೆ ಮನವಿಗಳು ಬಂದಿಲ್ಲ. ಚಾಲಕ, ನಿರ್ವಾಹಕರ ಕೊರತೆ‌ ಇರುವುದರಿಂದ ಚಾಲಕ ನಿರ್ವಾಹಕರ ನೇಮಕಾತಿ ನಡೆದ ಬಳಿಕ ಗಂಗೊಳ್ಳಿ-ಬೈಂದೂರು ನಡುವೆ ಕೆಎಸ್‌ಆರ್‌ ಟಿಸಿ ಬಸ್‌ ಸಂಚಾರ ಆರಂಭಿಸಲು ಪರಿಶೀಲನೆ ನಡೆಸಲಾಗುವುದು. – ನಾಗರಾಜ್‌, ಎಟಿಎಸ್‌, ಕೆಎಸ್‌ಆರ್‌ಟಿಸಿ ಕುಂದಾಪುರ ಘಟಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next