Advertisement

ಉಡುಪಿಯಲ್ಲಿ ಐಟಿ ಪಾರ್ಕ್‌ಗೆ ಆಗ್ರಹ: ಕೇಂದ್ರಕ್ಕೆ ಪೇಜಾವರ ಶ್ರೀಗಳ ಪತ್ರ

01:41 AM Feb 01, 2023 | Team Udayavani |

ಉಡುಪಿ: ಜಿಲ್ಲೆಯು ರಜತೋತ್ಸವ ಆಚರಿಸಿಕೊಳ್ಳುತ್ತಿದೆ. ಆರ್ಥಿಕತೆ ವೃದ್ಧಿ, ಪ್ರತಿಭಾ ಪಲಾಯನ ತಡೆಯಲು ಹಾಗೂ ಕೃಷಿ ಪುನಶ್ಚೇತನ, ಕೌಟುಂಬಿಕ ಜೀವನ ವ್ಯವಸ್ಥೆ ಸುಧಾರಣೆಗಾಗಿ ಜಿಲ್ಲೆಯಲ್ಲಿ ಸಾಫ್ಟ್‌ ವೇರ್‌ ಐಟಿ ಪಾರ್ಕ್‌ ಒಂದನ್ನು ಶೀಘ್ರವೇ ನಿರ್ಮಿಸುವಂತೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.

Advertisement

ಕೇಂದ್ರ ಸರಕಾರದ ಕೌಶಲಾಭಿ ವೃದ್ಧಿ, ಎಂಟರ್‌ಪ್ರನ್ಯೂರ್‌ಶಿಪ್‌, ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ತಿಂಗಳ ಹಿಂದೆಯೇ ಪತ್ರ ಬರೆದಿದ್ದು, ರಾಜ್ಯದ ಐಟಿ ಬಿಟಿ ಸಚಿವ ಡಾ| ಅಶ್ವತ್ಥ ನಾರಾಯಣ ಅವರಲ್ಲೂ ಶ್ರೀಗಳು ಚರ್ಚಿಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಅವ ರಿಗೂ ಪತ್ರದ ಪ್ರತಿ ಕಳುಹಿಸಿದ್ದು, ಅವರು ಕೂಡಲೇ ಈ ಬಗ್ಗೆ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಿದ್ಧವಾಗುತ್ತಿದೆ ಎಂಬ ಮಾಹಿತಿಯನ್ನು ಮಠದ ಮೂಲಗಳು ನೀಡಿವೆ.

ಉಡುಪಿ, ದ.ಕ. ಜಿಲ್ಲೆಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರುತ್ತಿದ್ದು, ಪ್ರತೀ ವರ್ಷ ಸಾವಿ ರಾರು ಪ್ರತಿಭಾವಂತ ಐಟಿ ಪದವೀಧರರು ಶಿಕ್ಷಣ ಮುಗಿಸಿ ಹೊರಬರುತ್ತಿದ್ದಾರೆ.

ಆದರೆ ಅದಕ್ಕನುಗುಣವಾಗಿ ಉದ್ಯೋಗದ ವ್ಯವಸ್ಥೆ ಇಲ್ಲಿ ಇಲ್ಲದಿರುವುದರಿಂದ ಬೆಂಗಳೂರು, ಮುಂಬಯಿ, ಪುಣೆ, ಚೆನ್ನೈ ಹೀಗೆ ಹೊರಜಿಲ್ಲೆ, ರಾಜ್ಯ, ದೇಶಕ್ಕೆ ತೆರಳುತ್ತಿದ್ದಾರೆ. ಪರಿಣಾಮವಾಗಿ ಪ್ರತಿಭಾ ಪಲಾಯನವಾಗಿ ಇಲ್ಲಿನ ಕೌಟುಂಬಿಕಜೀವನದ ಮೇಲೂ ಹೊಡೆತ ಬೀಳುತ್ತಿದೆ. ನೂರಾರು ಮನೆಗಳಲ್ಲಿ ವೃದ್ಧ ಹೆತ್ತವರಿಗೆ ಇಳಿ ವಯಸ್ಸಿನಲ್ಲಿ ಆಸರೆ ಇಲ್ಲದಂತಾಗಿದೆ. ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗುತ್ತಿದೆ.

ಈ ಸಾಮಾಜಿಕ ಸಮಸ್ಯೆಗಳ ಪರಿಹಾರ ಮತ್ತು ಜಿಲ್ಲೆಯ ಆರ್ಥಿಕತೆ ವೃದ್ಧಿಗೆ ಪೂರಕವಾಗಿ ಜಿಲ್ಲೆಯಲ್ಲಿ ಕನಿಷ್ಠ ನೂರು ಎಕರೆ ಪ್ರದೇಶದಲ್ಲಿ ಸಾಫ್ಟ್ವೇರ್‌ ಪಾರ್ಕ್‌ ನಿರ್ಮಿಸಬೇಕು. ಈ ಉದ್ದೇಶಕ್ಕೆ ಮೂಲಸೌಕರ್ಯ ಅಭಿವೃದ್ಧಿಗಾಗಿ 500 ಕೋಟಿ ರೂ.ಗಳಷ್ಟು ಅನುದಾನವನ್ನು ಶೀಘ್ರ ಒದಗಿಸುವಂತೆ ಪತ್ರದಲ್ಲಿ ಶ್ರೀಗಳು ಉಲ್ಲೇಖಿಸಿದ್ದಾರೆ.

Advertisement

ಉಡುಪಿಯಲ್ಲಿ ಐಟಿ ಪಾರ್ಕ್‌ ನಿರ್ಮಾಣವಾದರೆ ಸ್ಥಳೀಯ ಐಟಿ ಪದವೀಧರರಿಗೆ ಜಿಲ್ಲೆಯಲ್ಲೇ ಉದ್ಯೋಗ ದೊರೆಯುತ್ತದೆ ಮತ್ತು ಕೃಷಿ ಮೊದಲಾದ ಪೂರಕ ಚಟುವಟಿಕೆಗಳಿಗೂ ಹೊಸ ಶಕ್ತಿ ಸಿಗಲಿದೆ. ಜಿಲ್ಲೆಯಲ್ಲಿ ಐಟಿ ಉದ್ಯಮಕ್ಕೆ ಇರುವ ವಿಪುಲ ಅವಕಾಶಗಳನ್ನು ಶೀಘ್ರ ಬಳಸಿಕೊಳ್ಳುವಂತೆಯೂ ಶ್ರೀಗಳು ವಿವರಿಸಿದ್ದಾರೆ. ಈ ಪತ್ರಕ್ಕೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸೂಕ್ತವಾಗಿ ಸ್ಪಂದಿಸಿದ್ದು, ರಾಜ್ಯದಿಂದ ಪ್ರಸ್ತಾವನೆ ಬಂದ ತತ್‌ಕ್ಷಣ ಕಾರ್ಯ ಪ್ರವೃತ್ತರಾಗುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next