Advertisement

ರಕ್ತ ಕೊಟ್ಟೆವು ಪಿಂಚಣಿ ಬಿಡೆವು: ನೌಕರರ ಪ್ರತಿಭಟನೆ 

05:18 PM Oct 04, 2018 | |

ಧಾರವಾಡ: ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಯೋಜನೆ ಮುಂದುವರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಜಿಲ್ಲಾ ಘಟಕ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

Advertisement

‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೋಷವಾಕ್ಯದೊಂದಿಗೆ ಕಲಾಭವನ ಮೈದಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯವರೆಗೆ ಕೈಗೊಳ್ಳಲಾಯಿತು. ಇದಕ್ಕೂ ಮುನ್ನ 300ಕ್ಕೂ ಹೆಚ್ಚು ನೌಕರರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಜಿಪಂ ಅತಿಥಿ ಗೃಹದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಆ ಬಳಿಕ ಡಿಸಿ ಕಚೇರಿ ಎದುರು ಕೆಲ ಹೊತ್ತು ಧರಣಿ ನಡೆಸಿದ ಪ್ರತಿಭಟನಾಕಾರರು, ಸರ್ಕಾರಿ ನೌಕರರಿಗೆ ಹಿಂದಿನ ದಿನಗಳಲ್ಲಿ ಇದ್ದ ನಿಶ್ಚಿತ ಪಿಂಚಣಿ ಯೋಜನೆಯನ್ನೇ 2006ರ ಏಪ್ರಿಲ್‌ 1ರ ನಂತರ ಸೇವೆಗೆ ಸೇರಿರುವ ನೌಕರರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ನೌಕರರ ಇಳಿ ವಯಸ್ಸಿನಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ಹಿಂದಿನ ಪದ್ಧತಿಯಂತೆ ನಿಶ್ಚಿತ ಪಿಂಚಣಿ ಜಾರಿಗೊಳಿಸುವುದು ಅಗತ್ಯ. ಹೊಸ ಪಿಂಚಣಿ ಯೋಜನೆ ಅಡಿ ನೌಕರರ ವೇತನದಲ್ಲಿ ಕಡಿತಗೊಳಿಸಲಾಗುವ ಶೇ.10ರಷ್ಟು ವಂತಿಗೆಯು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆಯಾಗುತ್ತಿದೆ. ಇದಕ್ಕೆ ಸೂಕ್ತ ಕಾನೂನುಗಳು ಈವರೆಗೆ ರಚನೆಯಾಗಿಲ್ಲ. ಹೀಗಾಗಿ ಎನ್‌ಪಿಎಸ್‌ ರದ್ದುಗೊಳಿಸಿ ನೌಕರರ ವಂತಿಗೆ ಹಣವನ್ನು ಜಿಪಿಎಫ್ ಗೆ  ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಹೋರಾಟದ ಫ‌ಲವಾಗಿ ಈಗಾಗಲೇ ಮರಣ ಮತ್ತು ನಿವೃತ್ತಿ ಉಪದಾನ (ಡಿಸಿಆರ್‌ಜಿ) ಹಾಗೂ ಕುಟುಂಬ ಪಿಂಚಣಿ ಯೋಜನೆ ಜಾರಿಗೊಂಡಿದೆ. ಹಳೆ ಯೋಜನೆ ಜಾರಿಯಾಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಲಾಗಿದೆ.

ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಕರೆಣ್ಣವರ, ರಾಜ್ಯ ಸಹ ಕಾರ್ಯದರ್ಶಿ ರಾಜು ಮಾಳವಾಡ, ಪದಾಧಿಕಾರಿಗಳಾದ ಪಿ.ಎಫ್. ಗುಡೇನಕಟ್ಟಿ, ಬಸವರಾಜ ದೇಸೂರ, ಜಗದೀಶ ವಿರಕ್ತಮಠ, ಎಂ.ಡಿ. ಅತ್ತಾರ, ಎಂ.ಎನ್‌. ಮುಲ್ಲಾನವರ, ಅಡಿವೇಶ ಗಾಯಕವಾಡ, ಅಯ್ಯಪ್ಪ ಮೊಕಾಶಿ, ರಾಜಶೇಖರಗೌಡ ಕಂಟೆಪ್ಪಗೌಡರ, ಕಿರಣ ಪಾಟೀಲ, ಉಮೇಶ ಕುರುಬರ, ಬಸವಂತಪ್ಪಕೇರಿ, ಮಂಜುನಾಥ ಯಲಿಗಾರ, ರಾಜು ಲಮಾಣಿ, ಮಾರ್ತಾಂಡಪ್ಪ ಕತ್ತಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next