ಕಲಬುರಗಿ: ಪ್ರಸಕ್ತ ಮುಂಗಾರು ಮಳೆಯಿಂದ ಬೆಳೆಗಳು ನಾಶವಾಗಿದ್ದು, ಸೂಕ್ತ ಪರಿಹಾರ ಕೊಡುವಂತೆ ಒತ್ತಾಯಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಳೆದ ಮೂರು ನಾಲ್ಕು ವರ್ಷಗಳಿಂದ ರಾಜ್ಯವ್ಯಾಪಿ ಭಾರಿ ಪ್ರಮಾಣದ ಬರಗಾಲ ವ್ಯಾಪಿಸಿತ್ತು. ಈ ವರ್ಷ ರಾಜ್ಯದ ಹಲವೆಡೆಗಳಲ್ಲಿ ಸತತ ಮಳೆಯಿಂದ ಬೆಳೆಯ ಮೇಲೆ ನಷ್ಟದ ಕರಿನೆರಳು ಬೀರಿದೆ. ಹೊಲಗಳಲ್ಲೆಲ್ಲ ನೀರು ತುಂಬಿಕೊಂಡು ಬೆಳೆಗಳು ಸಂಪೂರ್ಣ ನಾಶವಾಗಿವೆ. ಬೀಜ, ಔಷಧಿ , ಗೊಬ್ಬರ ಹಾಳಾಗಿ ರೈತರು ಮತ್ತೂಮ್ಮೆ ನಷ್ಟ ಅನುಭವಿಸುವಂತೆ ಆಗಿದೆ ಎಂದರು.
ಶೆಂಗಾ, ಗೋವಿನ ಜೋಳ, ಹೆಸರು, ಉದ್ದು, ತೊಗರಿ, ಹತ್ತಿ, ಸಜ್ಜೆ, ಸೋಯಾ ಹಾಗೂ ದಿನನಿತ್ಯದ ತರಕಾರಿಗಳು ನಾಶವಾಗಿದ್ದು, ಸಾಲದ ಸುಳಿಯಿಂದ ಹೊರಬರಲಾಗದ ಸ್ಥಿತಿಯಲ್ಲಿ ರೈತರು ಇದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ರೈತರ ಇಂತಹ ಕಷ್ಟದ ಪರಿಸ್ಥಿತಿಯ ಗಂಭೀರತೆ ಅರಿತು ನೆರವಿಗೆ ಧಾವಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅತಿಯಾದ ಮಳೆಯಿಂದ ಹಾಳಾಗಿರುವ ಹೊಲಗಳನ್ನು ತುರ್ತು ಸಮೀಕ್ಷೆ ಮಾಡಬೇಕು. ಸಮರ್ಪಕ ನಷ್ಟ ಪರಿಹಾರವನ್ನು ರೈತರಿಗೆ ತುಂಬಬೇಕು. ಮಳೆಗೆ ರಸ್ತೆ, ಕಾಲುವೆ, ಕೃಷಿಹೊಂಡ, ಬದುಗಳು ಸಹ ಹಾನಿಗೊಳಗಾಗಿದ್ದು, ಸಮರೋಪಾದಿಯಲ್ಲಿ ಪುನರ್ ನಿರ್ಮಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಆರ್‌ಕೆಎಸ್ ಸಂಘಟನೆ ಜಿಲ್ಲಾಧ್ಯಕ್ಷ ಗಣಪತರಾವ್ ಮಾನೆ, ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಬಿ. ಗುಂಡಣ್ಣ ಎಂ.ಕೆ., ವಿಶ್ವನಾಥ ಸಿಂಗೆ, ರಾಜೇಂದ್ರ ಅತನೂರು, ಮಲ್ಲಣ್ಣ ದಂಡಬಾ, ರಾಘವೇಂದ್ರ ಅಲ್ಲಿಪೂರಕರ್, ಮಹಾದೇವ ಸ್ವಾಮಿ, ಸಾಬಣ್ಣ ನಾಟೀಕರ್, ಹರೀಶ ಸಂಗಾಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ರೈತರಿಗೆ ಪರಿಹಾರ ನೀಡಲು ಆಗ್ರಹ : ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದಾಗಿ ಮುಂಗಾರು ಬೆಳೆಗಳಾದ ಹೆಸರು, ಉದ್ದು ಸಂಪೂರ್ಣ ಹಾಳಾಗಿದೆ. ಹೀಗಾಗಿ ಸರ್ಕಾರ ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಕರವೇ ನಾರಾಯಣಗೌಡ ಬಣದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರ ಆಗ್ರಹಿಸಿದ್ದಾರೆ.
ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಉದ್ದು ಮತ್ತು ಹೆಸರು ಬೆಳೆ ಬಿತ್ತನೆ ಮಾಡಿ ಎಕರೆಗೆ ಹತ್ತರಿಂದ ಇಪ್ಪತ್ತು ಸಾವಿರ ರೂ. ಬೀಜ, ಗೊಬ್ಬರ, ಕೀಟನಾಶಕಕ್ಕೆ ರೈತರು ಖರ್ಚು ಮಾಡಿದ್ದಾರೆ. ಆದರೆ ಕಟಾವು ಸಮಯದಲ್ಲಿ ಸುರಿದ ಮಳೆ ಅವರು ಮಾಡಿದ ಶ್ರಮವನ್ನೆಲ್ಲಾ ವ್ಯರ್ಥ ಮಾಡಿದೆ. ಅದಕ್ಕಾಗಿ ಸರ್ಕಾರ ರೈತರ ಬದುಕಲ್ಲಿ ಈಗ ಬಂದಿರುವ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಮುಂದಾಗಿ, ವಾರದೊಳಗಾಗಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಉಮಾಕಾಂತ ಹಳ್ಳೆ ಮೂಲಕ ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿದರು. ಕರವೇ ಕಾರ್ಯಕರ್ತರಾದ ಈರಣ್ಣ ಕೊಳ್ಳಿ, ಸಂತೋಷ ಕೊಂಕನಳ್ಳಿ, ದೇವದಾಸ ಔರಸಂಗ, ದುರ್ಜನ್ ದಂಡಗುಂಡ, ರವಿ ಗುತ್ತೇದಾರ, ಶಿವಕುಮಾರ ಸುಣಗಾರ ಇದ್ದರು.