Advertisement

ಡೆಲ್ಟಾ ರೂಪಾಂತರಿಯೇ ಮುಂದೆ ದೊಡ್ಡ ಸವಾಲು

11:46 PM Jul 01, 2021 | Team Udayavani |

ಹೊಸದಿಲ್ಲಿ/ವಿಶ್ವಸಂಸ್ಥೆ: ಕೊರೊನಾದ ಹೊಸ ರೂಪಾಂತರಿ ಡೆಲ್ಟಾ ಮುಂದಿನ ದಿನಗಳಲ್ಲಿ ಪ್ರಧಾನ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಜೂ.29ಕ್ಕೆ ಕೊನೆಗೊಂಡ ಮಾಹಿತಿ ಪ್ರಕಾರ ಡೆಲ್ಟಾ ರೂಪಾಂತರಿ ಸೋಂಕು 96 ದೇಶಗಳಲ್ಲಿ ದೃಢಪಟ್ಟಿದೆ.

Advertisement

ಮುಂದಿನ ದಿನಗಳಲ್ಲಿ ಈ ರೂಪಾಂತರಿಯೇ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಹಬ್ಬುವ ಸೋಂಕಾಗಿ ಪರಿಣಮಿಸಲಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಜನ ಸೋಂಕಿತರಾಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಲಿದೆ. ಈಗಿನ ಪ್ರಮಾಣವನ್ನು ಊಹಿಸಿಕೊಂಡರೆ, ಹಾಲಿ ಇರುವ ರೂಪಾಂತರಿ ಸೋಂಕುಗಳಿಗಿಂತ ಡೆಲ್ಟಾ ಮಾದರಿಯೇ ಹೆಚ್ಚು ಅನಾಹುತಕಾರಿಯಾಗಿ ಪರಿಣಮಿಸಲಿದೆ ಎಂದಿದೆ.

ಮತ್ತೆ ಹೆಚ್ಚಳ: ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ಎರಡು ತಿಂಗಳುಗಳಿಂದ ಕಡಿಮೆ ಹಂತದಲ್ಲಿದ್ದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಗುರುವಾರ ಹೆಚ್ಚಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ಸೋಂಕು ಪ್ರಕರಣ ಶೇ.10ರಷ್ಟು ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದೇ ವೇಳೆ, ಭಾರತದಲ್ಲಿ ಬುಧವಾರದಿಂದ ಗುರುವಾರಕ್ಕೆ 24 ಗಂಟೆಗಳಲ್ಲಿ 48,786 ಪ್ರಕರಣಗಳು ಪತ್ತೆಯಾಗಿ, 1005 ಮಂದಿ ಅಸುನೀಗಿದ್ದಾರೆ. ಗುಣಮುಖ ಪ್ರಮಾಣ ಶೇ.96.97ಕ್ಕೇರಿಕೆಯಾಗಿದೆ.

ಅನುಮತಿಗೆ ಝೈಡಸ್‌ ಅರ್ಜಿ :

Advertisement

ಝೈಡಸ್‌ ಕ್ಯಾಡಿಲಾ ಕಂಪೆನಿಯು ತನ್ನ ಲಸಿಕೆಗೆ ತುರ್ತು ಬಳಕೆಗೆ ಅನುಮತಿ ಕೋರಿ ಭಾರತೀಯ ಔಷಧ ಮಹಾನಿರ್ದೇಶನಾಲಯ(ಡಿಸಿಜಿಐ)ಕ್ಕೆ ಅರ್ಜಿ ಸಲ್ಲಿಸಿದೆ. ಈವರೆಗೆ ಭಾರತದ 50 ಕೇಂದ್ರಗಳಲ್ಲಿ ಅತೀ ದೊಡ್ಡ ಕ್ಲಿನಿಕಲ್‌ ಟ್ರಯಲ್‌ ಅನ್ನು ಕೈಗೊಂಡಿರುವುದಾಗಿ ಕಂಪೆನಿ ತಿಳಿಸಿದೆ. ಇದೇ ವೇಳೆ, ಭಾರತದಲ್ಲಿ ರಷ್ಯಾದ ಸಿಂಗಲ್‌ ಡೋಸ್‌ ಲಸಿಕೆ ಸ್ಪುಟ್ನಿಕ್‌ ಲೈಟ್‌ ಅನ್ನು 3ನೇ ಹಂತದ ಪ್ರಯೋಗಕ್ಕೆ ಒಳಪಡಿಸಲು ಡಾ| ರೆಡ್ಡೀಸ್‌ ಲ್ಯಾಬೊರೇಟರೀಸ್‌ಗೆ ಕೇಂದ್ರ ಸರಕಾರದ ವಿಷಯ ತಜ್ಞರ ಸಮಿತಿ ಅನುಮತಿ ನಿರಾಕರಿಸಿದೆ.

ಕೆಲವು ಬಡ ದೇಶಗಳಲ್ಲಿ ಇನ್ನೂ ಆರೋಗ್ಯ ಸಿಬಂದಿಗೇ ಲಸಿಕೆ ನೀಡಲಾಗಿಲ್ಲ. ಇಂಥ ಅಸಮಾನತೆ ಕಳವಳಕಾರಿ. ಪ್ರತಿಯೊಂದು ದೇಶದ ಕನಿಷ್ಠ ಶೇ.10ರಷ್ಟು ಜನರಿಗೆ ಸೆಪ್ಟಂಬರ್‌ ವೇಳೆಗೆ ಲಸಿಕೆ ವಿತರಣೆಯಾಗಬೇಕು. ಏಕೆಂದರೆ ಎಲ್ಲೆಡೆಯೂ ಸೋಂಕು ನಿರ್ನಾಮವಾಗದ ಹೊರತು, ಎಲ್ಲೂ ಸೋಂಕು ನಿರ್ನಾಮವಾಗದು.-ಡಾ| ಟೆಡ್ರೋಸ್‌ ಘೆಬ್ರೆಯೇಸಸ್‌, ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next