ನವದೆಹಲಿ: ಭಾರತದಲ್ಲಿ ಎರಡನೇ ಕೋವಿಡ್ ಅಲೆಗೆ ಡೆಲ್ಟಾ ರೂಪಾಂತರ ಸೋಂಕು ಪ್ರಾಥಮಿಕ ಕಾರಣವಾಗಿದೆ ಎಂದು ಐಎನ್ ಎಸ್ ಎಸಿಒಜಿ ಮತ್ತು ಎನ್ ಸಿಡಿಸಿ(ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ)ಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ:ಇನ್ಮುಂದೆ ದಾನ ಸ್ವೀಕರಿಸುವುದಿಲ್ಲವಂತೆ ಉಪ್ಪಿ : ಟ್ವೀಟ್ ನಲ್ಲಿ ಏನಿದೆ ಗೊತ್ತಾ?
ಹೆಚ್ಚು ಪರಿಣಾಮಕಾರಿಯಾಗಿ ಹರಡಬಲ್ಲ ಸಾಮರ್ಥ್ಯ ಹೊಂದಿರುವ ಬಿ.1.617 ರೂಪಾಂತರ ಮತ್ತು ಅದರ ವಂಶಾವಳಿ ಬಿ.1.617.2 ವೈರಸ್, ಆಲ್ಫಾ ರೂಪಾಂತರ ಬಿ.1.1.7ಗಿಂತಲೂ ದೇಶದಲ್ಲಿ ಶೇ.50ರಷ್ಟು ಕೋವಿಡ್ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಡೆಲ್ಟಾ ಸೋಂಕಿನಿಂದ ಸಂಭವಿಸಿದ ಸಾವಿನ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ ಎಂದು ವರದಿ ಹೇಳಿದೆ. ಆಲ್ಫಾ ವೈರಸ್ ಗೆ ಹೋಲಿಸಿದರೆ ಡೆಲ್ಟಾ ರೂಪಾಂತರ ಸೋಂಕಿನಿಂದ ಹೆಚ್ಚು ಅಪಾಯವಿದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.
ಭಾರತದಲ್ಲಿ ಪತ್ತೆಯಾಗಿರುವ ಕೋವಿಡ್ ವೈರಾಣುವಿನ B.1617.1 ಮತ್ತು B.1.617.2 ರೂಪಾಂತರಿಯ ಈ ಹೆಸರನ್ನು ಕ್ರಮವಾಗಿ “ಕಪ್ಪಾ” ಮತ್ತು “ಡೆಲ್ಟಾ” ಎಂದು ನೂತನವಾಗಿ ಹೆಸರಿಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಘೋಷಿಸಿತ್ತು.
ವಿಶ್ವ ಆರೋಗ್ಯ ಸಂಸ್ಥೆ ಕೇವಲ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ರೂಪಾಂತರಿಯ ಹೆಸರನ್ನು ಮರುನಾಮಕರಣ ಮಾಡಿದ್ದಲ್ಲದೇ, ಇತರ ರೂಪಾಂತರಿ ಸೋಂಕುಗಳಿಗೂ ಗ್ರೀಕ್ ವರ್ಣಮಾಲೆಯ ಹೆಸರನ್ನು ಇಡುವುದಾಗಿ ತಿಳಿಸಿತ್ತು.
ಜಗತ್ತಿನಾದ್ಯಂತ ಕಳವಳ ಮೂಡಿಸಿರುವ ಕೋವಿಡ್ ರೂಪಾಂತರಿ ತಳಿಗೆ ಮೂರು ವಾರಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಮರು ನಾಮಕರಣ ಮಾಡುವ ನಿರ್ಧಾರ ತೆಗೆದುಕೊಂಡಾಗ ಯಾವುದೇ ಆಧಾರವಿಲ್ಲದೇ ಭಾರತೀಯ ರೂಪಾಂತರ ತಳಿ ಎಂದು ಬಳಸುತ್ತಿದ್ದ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತ್ತು.