ಭೋಪಾಲ್: ಕೋವಿಡ್ 19 ಸೋಂಕಿನ ಇತ್ತೀಚಿನ ರೂಪಾಂತರಿ ಡೆಲ್ಟಾ ಪ್ಲಸ್ ಸೋಂಕು ತಾಗಿದ್ದ ವ್ಯಕ್ತಿಯೊಬ್ಬರು ಬುಧವಾರ ಅಸುನೀಗಿದ್ದಾರೆ. ಉಜ್ಜಯಿನಿಯ ನಿವಾಸಿಗೆ ಡೆಲ್ಟಾ ಪ್ಲಸ್ ಕೋವಿಡ್ ಸೋಂಕು ತಾಗಿರುವುದು ದೃಢವಾಗಿತ್ತು. ಇದರೊಂದಿಗೆ ಮಧ್ಯ ಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕಿನಿಂದ ಮೊದಲ ಸಾವಾಗಿದೆ.
ಮಧ್ಯ ಪ್ರದೇಶ ರಾಜ್ಯದಲ್ಲಿ ಇದುವರೆಗೆ ಐದು ಡೆಲ್ಟಾ ಪ್ಲಸ್ ಸೋಂಕು ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಮೂರು ಪ್ರಕರಣಗಳು ಭೋಪಾಲ್ ನಲ್ಲಿ ಪತ್ತೆಯಾಗದ್ದರೆ ಎರಡು ಪ್ರಕರಣಗಳು ಉಜ್ಜಯಿನಿಯಲ್ಲಿ ದೃಢವಾಗಿದೆ.
ಇದನ್ನೂ ಓದಿ:ಡೆಲ್ಟಾ ಮತ್ತು ಡೆಲ್ಟಾ ಪ್ಲಸ್: ವ್ಯತ್ಯಾಸವೇನು? ಯಾವುದು ಹೆಚ್ಚು ಅಪಾಯಕಾರಿ?
ಡೆಲ್ಟಾ ಪ್ಲಸ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪತಿಗೆ ಮೊದಲು ಕೋವಿಡ್ ಸೋಂಕು ತಾಗಿರುವುದು ದೃಢವಾಗಿತ್ತು. ಬಳಿಕ ಮಹಿಳೆಗೆ ಸೋಂಕು ತಾಗಿದೆ. ಮಹಿಳೆಯ ಪತಿ ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಆದರೆ ಮಹಿಳೆ ಇದುವರೆಗೂ ಒಂದೂ ಡೋಸ್ ಲಸಿಕೆ ಪಡೆದಿಲ್ಲ.
ಈ ಬಗ್ಗೆ ಹೇಳಿಕೆ ನೀಡಿರುವ ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, ಸರ್ಕಾರವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ. ಡೆಲ್ಟಾ ಪ್ಲಸ್ ಸೋಂಕು ತಾಗಿದ ರೋಗಿಗಳ ಸಂಪರ್ಕಕ್ಕೆ ಬಂದವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದರು.