ಹೈದರಾಬಾದ್: ಇ-ಕಾಮರ್ಸ್ ಸಂಸ್ಥೆಯೊಂದರ ಡೆಲಿವರಿ ವ್ಯಕ್ತಿಯೊಬ್ಬರು ಗ್ರಾಹಕರೊಬ್ಬರ ನಾಯಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಣಿಕೊಂಡದ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಡೆಲಿವರಿ ಎಕ್ಸಿಕ್ಯೂಟಿವ್, ಹಾಸಿಗೆ ವಿತರಿಸಲು ಅಲ್ಲಿಗೆ ಹೋದಾಗ, ನಾಯಿಯು ಗ್ರಾಹಕರ ಬಾಗಿಲ ಬಳಿ ಬೊಗಳಲು ಪ್ರಾರಂಭಿಸಿತು, ದಾಳಿಗೆ ಹೆದರಿ, ಆ ವ್ಯಕ್ತಿ ಸುರಕ್ಷತೆಗಾಗಿ ಓಡಿ ರೇಲಿಂಗ್ ಅನ್ನು ಹತ್ತಿದ್ದು ಅಲ್ಲಿಂದ ಜಾರಿ ನೆಲದ ಮೇಲೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಗ್ರಾಹಕರು ಮತ್ತು ಇತರರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಹಲವು ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ರಾಯದುರ್ಗಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಯಿ ಮಾಲಕರ ವಿರುದ್ಧ ಐಪಿಸಿ ಸೆಕ್ಷನ್ 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ. ಏತನ್ಮಧ್ಯೆ, ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯುಯು) ಪ್ರಕಟಣೆಯಲ್ಲಿ ನಾಯಿ ಮಾಲಕರು ವಿತರಣಾ ಕಾರ್ಯನಿರ್ವಾಹಕರ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ವರ್ಷ ಜನವರಿಯಲ್ಲಿ, 23 ವರ್ಷದ ಆಹಾರ ವಿತರಣಾ ಕಾರ್ಯನಿರ್ವಾಹಕನು ತನ್ನನ್ನು ಹಿಂಬಾಲಿಸಿದ ಗ್ರಾಹಕರ ಸಾಕು ನಾಯಿಯ ದಾಳಿಯ ಭಯದಿಂದ ಇಲ್ಲಿನ ಅಪಾರ್ಟ್‌ಮೆಂಟ್ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದ ನಂತರ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದನ್ನು ನೆನಪಿಸಿಕೊಳ್ಳಬಹುದು.