ಬೆಂಗಳೂರು: ಬಿಬಿಎಂಪಿ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳಿಂದ ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳನ್ನು ಹೊತ್ತು ಕೊಡಗಿನತ್ತ ತೆರಳಿದ ಟ್ರಕ್‌ಗಳಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೋಮವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದರು.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೊಡಗು ಜಿಲ್ಲೆಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿ, ನೌಕರರು ಸಹ ನಿಂತಿದ್ದು, ಸಂತ್ರಸ್ತರ ನೆರವಿಗಾಗಿ 3.18 ಕೋಟಿ ರೂ. ನೀಡಿದ್ದಾರೆ. ಅದರಲ್ಲಿ 1 ಕೋಟಿ ರೂ. ಕೇರಳ ರಾಜ್ಯಕ್ಕೆ ಕಳುಹಿಸಿ, ಉಳಿದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸಿದ್ದಾರ್ಥ ಶಿಕ್ಷಣ ಸಂಸ್ಥೆ ಹಾಗೂ ಬಿಬಿಎಂಪಿಯಿಂದ ತಲಾ ಎರಡು ಟ್ರಕ್ ಬೆಡ್‌ಶೀಟ್, ನೀರು, ಬಿಸ್ಕೆಟ್ , ಬೇಳೆಕಾಳುಗಳು ಸೇರಿದಂತೆ ಇತರೆ ಸಾಮಗ್ರಿಗಳು ಹಾಗೂ ಪರಿಹಾರ ಪರಿಕರಗಳನ್ನು ಕಳುಹಿಸಿದ್ದು, ಮೈಸೂರು, ಮಂಗಳೂರು, ಹಾಸನದಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಸಂತ್ರಸ್ತರ ನೆರವಿಗೆ ಧಾವಿಸುವ ದಾನಿಗಳು ಅಗತ್ಯ ಪದಾರ್ಥಗಳನ್ನು ಇಲ್ಲಿಗೆ ತಲುಪಿಸಿದರೆ, ಅಲ್ಲಿಂದ ಕೊಡಗಿನ ಜನರಿಗೆ ಪೂರೈಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಇದೇ ವೇಳೆ ಮೇಯರ್ ಆರ್.ಸಂಪತ್‌ರಾಜ್, ಉಪಮೇಯರ್ ಪದ್ಮಾವತಿ ಹಾಗೂ ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಪಾಲಿಕೆಯ ವತಿಯಿಂದ ಕೊಡಗು ನಿರಾಶ್ರಿತರಿಗಾಗಿ 2.80 ಕೋಟಿ ರೂ. ಚೆಕ್ ಹಾಗೂ ಕೇರಳ ರಾಜ್ಯಕ್ಕೆ 1 ಕೋಟಿ ರೂ. ಮೊತ್ತದ ಚೆಕ್‌ಅನ್ನು ಪರಮೇಶ್ವರ್ ಅವರಿಗೆ ಹಸ್ತಾಂತರಿಸಿದರು. ಸಚಿವ ಸಾ.ರಾ.ಮಹೇಶ್, ಆಯುಕ್ತ ಮಂಜನಾಥ್‌ಪ್ರಸಾದ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಉಪಸ್ಥಿತರಿದ್ದರು.
ಸ್ವತ್ಛತಾ ಕಾರ್ಯಕ್ಕಾಗಿ 300 ಮಂದಿ ಪೌರಕಾರ್ಮಿಕರು: ಪಾಲಿಕೆಯಿಂದ ಈಗಾಗಲೇ 100 ಇ-ಶೌಚಾಲಯಗಳನ್ನು ಕಳುಹಿಸಲಾಗಿದ್ದು, ಪರಿಹಾರ ಕಾರ್ಯಗಳಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಬೆಂಗಳೂರಿನಿಂದ ಒದಗಿಸಲಾಗುವುದು. ಅದರಂತೆ ಕೊಡಗಿನಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಹಾಗೂ ಸ್ವತ್ಛತಾ ಕಾರ್ಯಕ್ಕಾಗಿ ಪಾಲಿಕೆಯ 300 ಮಂದಿ ಪೌರಕಾರ್ಮಿಕರು ಕುಶಾಲನಗರಕ್ಕೆ ಹೋಗಿದ್ದಾರೆ.
ಜತೆಗೆ ನೀರು, ಒಳಚರಂಡಿ ಸಮಸ್ಯೆಗಳ ನಿವಾರಣೆಗೆ ಜಲಮಂಡಳಿಯ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿಯನ್ನು ಸಹ ಕಳುಹಿಸಿಕೊಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಫೋಟೋ ಕ್ಯಾಪ್ಷನ್: ಬಿಬಿಎಂಪಿ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳಿಂದ ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳನ್ನು ಹೊತ್ತು ಕೊಡಗಿನತ್ತ ತೆರಳಿದ ಟ್ರಕ್‌ಗಳಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೋಮವಾರ ಚಾಲನೆ ನೀಡಿದರು.