ಆನ್‌ಲೈನ್ ಫುಡ್ ಡೆಲಿವರಿ ಮಾಡುವ ಪತಿಕೃತ್ ಇಷ್ಟ ಆಗೋದೇ ಇದಕ್ಕೆ… ನಾವು- ನೀವೆಲ್ಲ ಆನ್‌ಲೈನ್‌ನಲ್ಲಿ ಊಟ ಬುಕ್ ಮಾಡಿ, ಕ್ಯಾನ್ಸೆಲ್ ಮಾಡುತ್ತೇವಲ್ಲ, ಅಂಥ ಕ್ಯಾನ್ಸಲ್ ಆದ ಊಟವನ್ನು ನೇರವಾಗಿ, ಬಡಮಕ್ಕಳಿಗೆ ತಲುಪಿಸುವ ಪುಣ್ಯದ ಕೆಲಸ ಮಾಡುತ್ತಾನಾತ…
ಸಾಮಾನ್ಯವಾಗಿ ನಾವೆಲ್ಲ ಮೂರು ಹೊತ್ತು ಊಟ ಮಾಡಿ, ನಿದ್ರೆಗೆ ಜಾರುವವರು. ಒಂದೊತ್ತು ಊಟ ಬಿಟ್ಟರೂನೂ, ದೇಹದಲ್ಲೇನೋ ತಳಮಳ ಶುರುವಾಗಿ, ಅಡುಗೆಮನೆಗೆ ಹೋಗಿ ಏನಾದ್ರೂ ತಿನ್ನೋದಿಕ್ಕೆ ಇದ್ಯಾ ಅಂತ ಪಾತ್ರೆಗಳನ್ನು, ಡಬ್ಬಿಗಳನ್ನು ಇಣುಕಿ ನೋಡುತ್ತೇವೆ. ಆದರೆ, ದೇಶದಲ್ಲಿ ನಮ್ಮಂತೆ ಎಲ್ಲರೂ ಅದೃಷ್ಟವಂತ ಇರೋದಿಲ್ವಲ್ಲಾ? ಹಾಗೆ ತಡಕಾಡಲು ಕೆಲವರಿಗೆ ಮನೆಯೇ ಇರೋದಿಲ್ಲ. ಈ ದೇಶದಲ್ಲಿ 13 ಕೋಟಿಗೂ ಅಧಿಕ ಮಂದಿ, ರಾತ್ರಿ ಹೊಟ್ಟೆಗೆ ತಿನ್ನಲೇನೂ ಸಿಗದೇ, ಉಪವಾಸದಲ್ಲೇ ನಿದ್ದೆಗೆ ಜಾರುತ್ತಾರಂತೆ.
ಹಾಗೆ ಹಸಿದವರ ಹೊಟ್ಟೆ ತುಂಬಿಸುವ ಕೆಲಸವನ್ನು ಇಲ್ಲೊಬ್ಬ ಝೊಮೇಟೋ ಡೆಲಿವರಿ ಬಾಯ್ ಮಾಡುತ್ತಿದ್ದಾನೆ! ಅವನ ಹೆಸರು, ಪತಿಕೃತ್ ಸಹಾ. ತನ್ನಂತೆಯೇ ಸಾಮಾಜಿಕ ಕಾಳಜಿಯನ್ನು ಇಟ್ಟುಕೊಂಡ, ರೆಸ್ಟೋರೆಂಟ್‌ನ ಗೆಳೆಯನೊಟ್ಟಿಗೆ ಸೇರಿ, ನಿತ್ಯವೂ ಬಡವರಿಗೆ ಊಟ ನೀಡುವ ಕೆಲಸ ಮಾಡುತ್ತಿದ್ದಾನೆ. ಅದು ಹೇಗೆ ಗೊತ್ತೇ? ನಾವು-ನೀವೆಲ್ಲ ಆನ್‌ಲೈನ್‌ನಲ್ಲಿ ಊಟ ಬುಕ್ ಮಾಡಿ, ಕ್ಯಾನ್ಸೆಲ್ ಮಾಡುತ್ತೇವಲ್ಲ, ಅಂಥ ಕ್ಯಾನ್ಸಲ್ ಆದ ಊಟವನ್ನು ನೇರವಾಗಿ, ಬಡಮಕ್ಕಳಿಗೆ ತಲುಪಿಸುವ ಪುಣ್ಯದ ಕೆಲಸ ಅದು.
ಪತಿಕೃತ್ ಈ ಮಹದುಪಕಾರಕ್ಕೆ ಇಳಿಯಲೂ ಒಂದು ಕಾರಣವುಂಟು. ಕೋಲ್ಕತ್ತಾದ ಡಂ ಡಂ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ನಿನಲ್ಲಿ ಒಬ್ಬ ಹಸಿದ ಬಾಲಕ ಕುಳಿತಿದ್ದನಂತೆ. ಬಂದವರ ಬಳಿಯೆಲ್ಲ ಕೈ ಚಾಚುತ್ತಾ, ಚಿಲ್ಲರೆಗಾಗಿ ಕಾತರಿಸುತ್ತಿದ್ದ, ಆ ದೃಶ್ಯ ನೋಡಿ, ಪತಿಕೃತ್‌ನ ಹೃದಯ ಕರಗಿ ನೀರಾಯಿತು. ಮೇಲಿನ ಜೇಬಿನಲ್ಲಿದ್ದ 100 ರೂಪಾಯಿ ನೋಟನ್ನು ಅವನ ಕೈಗಿಟ್ಟು, ತನ್ನ ಪಾಡಿಗೆ ತಾನು ಯಾರನ್ನೋ ಕಾಯುತ್ತಾ ನಿಂತುಬಿಟ್ಟ. ಒಂದೆರಡು ನಿಮಿಷ ಆಗಿತ್ತಷ್ಟೇ… ಪತಿಕೃತ್‌ಗೆ ಕೋಪ ಬಂದು, ಆ ಹಸಿದ ಹುಡುಗನಿಗೆ ಕಪಾಳಮೋಕ್ಷವನ್ನೂ ಮಾಡಿದ್ದ. ಇದಕ್ಕೆ ಕಾರಣವೂ ಇತ್ತು. ಆತ ಆ ದುಡ್ಡಿನಲ್ಲಿ ಡ್ರಗ್ಸ್ ಖರೀದಿಸುತ್ತಿದ್ದ!
ಇನ್ನಾéವತ್ತೂ ಇಂಥ ಬಡಮಕ್ಕಳಿಗೆ ಹಣ ಕೊಡೋದಿಲ್ಲ, ಊಟವನ್ನೇ ಕೊಡ್ತೀನಿ ಅನ್ನೋ ಸಂಕಲ್ಪವನ್ನೂ ಅಲ್ಲೇ ಮಾಡಿಬಿಟ್ಟ, ಪತಿಕೃತ್. ಶಾಲೆ ಬಿಟ್ಟು, ಹೀಗೆ ಭಿಕ್ಷಕರಾಗಿ ಬೀದಿ ಮೇಲೆ ನಿಂತ ಒಂದಿಷ್ಟು ಮಕ್ಕಳನ್ನು ಒಟ್ಟುಗೂಡಿಸಿದ. ಇವರ ಹಸಿವು ತಣಿಸಲೆಂದೇ, ತನ್ನ ಮುನ್ಸಿಪಲ್ ಕಾರ್ಪೋರೇಷನ್ನಿನ ಹುದ್ದೆ ತೊರೆದು, “ಝೊಮೇಟೋ’ ಡೆಲಿವರಿ ಬಾಯ್ ಆಗಿ ಸೇರಿಕೊಂಡ. ತನ್ನಂತೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಹುಡುಗರನ್ನೂ ಜತೆಗೆ ಸೇರಿಸಿಕೊಂಡು, ಅನ್ನದಾನದ ಕೈಂಕರ್ಯಕ್ಕೆ ಇಳಿದ.
ಪತಿಕೃತ್‌ನ ಈ ಸಾಹಸಕ್ಕೆ ಅನೇಕ ರೆಸ್ಟೋರೆಂಟುಗಳು ಸಹಕರಿಸುತ್ತಿವೆ. ಏನಿಲ್ಲವೆಂದರೂ 100 ಆರ್ಡರ್‌ಗಳಲ್ಲಿ ಕನಿಷ್ಠ 10 ಆರ್ಡರ್‌ಗಳು ಕ್ಯಾನ್ಸಲ್ ಆಗುತ್ತವಂತೆ. ಪತಿಕೃತ್ ಕೆಲಸ ಮಾಡುತ್ತಿರುವ ಪರಿಸರದಲ್ಲಿ ಅವೆಲ್ಲವೂ ಹಸಿದವರ ತಟ್ಟೆ ಸೇರುತಿದೆ. ಇನ್ನು ರೆಸ್ಟೋರೆಂಟುಗಳಲ್ಲಿ ಉಳಿಯುವ ಆಹಾರವನ್ನೂ, ಇಂಥ ಬಡ, ಅನಾಥ ಮಕ್ಕಳಿಗೆ ಪೂರೈಸುತ್ತಿರುವ ಈತ, ಇದರಲ್ಲೇ ಬದುಕಿನ ಸಾರ್ಥಕತೆ ಕಂಡುಕೊಂಡಿದ್ದಾನೆ.