ಚಾಮರಾಜನಗರ: ಅಸಂಘಟಿತ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಒದಗಿಸುವ ನೂತನ ಯೋಜನೆಗಳಾದ ಪ್ರಧಾನಮಂತ್ರಿ ಶ್ರಮಯೋಗಿ, ಮಾನ್‌ಧನ್ ಹಾಗೂ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ನೀಡುವ ರಾಷ್ಟ್ರೀಯ ಪಿಂಚಣಿ ಯೋಜನೆ ಸೌಲಭ್ಯ ತಲುಪಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಹಾಗೂ ಎನ್‌ಪಿಎಸ್ ಟ್ರೇಡರ್ ಪಿಂಚಣಿ ಯೋಜನೆ ಕುರಿತ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವ್ಯಾಪಕವಾಗಿ ಪ್ರಚಾರ ಕೈಗೊಳ್ಳಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ ಅಸಂಘಟಿತ ಕಾರ್ಮಿಕರಿಗೆ ಅತ್ಯಂತ ಉಪಯುಕ್ತವಾಗಿದೆ. ಇದೇ ರೀತಿ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಒದಗಿಸುವ ಯೋಜನೆ ಆರ್ಥಿಕ ಭದ್ರತೆ ನೀಡುವ ಉದ್ದೇಶ ಹೊಂದಿದೆ. ಈ ಉಪಯೋಗಿ ಯೋಜನೆಗಳ ಬಗ್ಗೆ ವ್ಯಾಪಕವಾಗಿ ಪ್ರಚಾರ ಕೈಗೊಂಡು ಕಾರ್ಮಿಕರು, ವ್ಯಾಪಾರಿಗಳು ಸ್ವಯಂ ಉದ್ಯೋಗಿಗಳು ಇದರ ಪ್ರಯೋಜನ ಪಡೆಯಲು ಅಧಿಕಾರಿಗಳು ವಿಶೇಷ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಇಲಾಖೆಗಳ ನಡುವೆ ಸಮನ್ವಯತೆ ಇರಲಿ: ಕೇಂದ್ರ ಕಾರ್ಮಿಕ ಮಂತ್ರಾಲಯ ಕಾರ್ಯಯೋಜನೆ ರೂಪಿಸಿ ನೀಡಲಾಗಿರುವ ಮಾರ್ಗಸೂಚಿಗಳ ಅನುಸಾರ ಯೋಜನೆ ಜಾರಿಯಾಗಬೇಕು. ಜಿಲ್ಲೆಯಲ್ಲಿ ಸ್ವಸಹಾಯ ಸಂಘದ ಸದಸ್ಯರು, ಕೃಷಿ ಕಾರ್ಮಿಕರು, ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕಾರ್ಮಿಕರು, ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಇಟ್ಟಿಗೆ ಗೂಡು ಗೃಹ ಕಾರ್ಮಿಕರು, ಮೀನುಗಾರರು, ವ್ಯಾಪಾರಿಗಳು ಯೋಜನೆಯಡಿ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಯೋಜನೆ ಜಾರಿಗೆ ಮುಂದಾಗುವಂತೆ ಕಾವೇರಿ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಸಂಘಗಳು, ಕಾರ್ಮಿಕ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘಸಂಸ್ಥೆಗಳ ಸಹಕಾರದೊಂದಿಗೆ ಮಹತ್ವಾಕಾಂಕ್ಷಿ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಸಲು ಕಾರ್ಯೋನ್ಮುಖರಾಗುವಂತೆ ತಿಳಿಸಿದರು.
ಅರ್ಹರು ಪಿಂಚಣಿ ಪಡೆಯಿರಿ: 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3 ಸಾವಿರ ರೂ. ನಿಶ್ಚಿತ ಮಾಸಿಕ ಪಿಂಚಣಿ ಪಡೆಯಲು ಅನುಕೂಲ ಕಲ್ಪಿಸುವ ಯೋಜನೆ ಬಗ್ಗೆ ವ್ಯಾಪಕವಾಗಿ ಮನವರಿಕೆ ಮಾಡಿಕೊಡಬೇಕು. ಸಾಮಾನ್ಯ ಸೇವಾ ಕೇಂದ್ರಗಳು, ಕಾರ್ಮಿಕ ಇಲಾಖೆ ಇನ್ನಿತರ ಕಡೆ ಫಲಾನುಭವಿಗಳ ನೋಂದಣಿಗಾಗಿ ಅನುಕೂಲ ಮಾಡಿಕೊಡಲಾಗಿದೆ. ಇಂತಹ ಕೇಂದ್ರಗಳು, ಕಚೇರಿಗಳಲ್ಲಿ ಕಾರ್ಮಿಕರು ವ್ಯಾಪಾರಿಗಳಿಗೆ ಉತ್ತಮ ಸೇವೆ ನೀಡಬೇಕು.
ಯೋಜನೆಯ ಪರಿಪೂರ್ಣ ಮಾಹಿತಿ ಒದಗಿಸಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಪಿಂಚಣಿ ಯೋಜನೆಯನ್ನು ಅರ್ಹರೆಲ್ಲರೂ ಪಡೆಯುವಂತಾಗಬೇಕೆಂದು ತಿಳಿಸಿದರು. ಜಿಲ್ಲಾ ಕಾರ್ಮಿಕ ಹಿರಿಯ ನಿರೀಕ್ಷಕಿ ಕೆ.ಗೀತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ. ರವಿ, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಇದ್ದರು.