Advertisement

ಪ್ರವಾಹ ಸಂತ್ರಸ್ತರಿಗೆ ತಕ್ಷಣ ಪರಿಹಾರ ವಿತರಿಸಿ

11:11 PM Sep 27, 2019 | Lakshmi GovindaRaju |

ಬೆಂಗಳೂರು: ಮುಂದಿನ ತಿಂಗಳು ರಾಜ್ಯ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಟೀಕೆ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Advertisement

ಜತೆಗೆ, ಉಪ ಚುನಾವಣೆ ರದ್ದಾದ ಹಿನ್ನೆಲೆ ಯಲ್ಲಿ ರಾಜ್ಯ ವಿಧಾನಮಂಡಲದ ಅಧಿವೇಶನವನ್ನು ಹತ್ತು ದಿನಗಳ ಕಾಲ ನಡೆಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಅ.10 ರಿಂದ 12 ರವರೆಗೆ ಅಧಿವೇಶನದ ದಿನಾಂಕ ನಿಗದಿಪಡಿಸಲಾಗಿದ್ದು, ಇದನ್ನು ಅ.10 ರಿಂದ 19 ಅಥವಾ ಅ.14 ರಿಂದ 25 ರವರೆಗೆ ನಡೆಸಬಹುದಾ ಎಂಬ ಬಗ್ಗೆಯೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯುರಪ್ಪ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಮುಂದಿನ ವಾರ ಸಂಪುಟ ಸಭೆ ನಡೆಸಿ, ಅಧಿವೇಶನವನ್ನು ಹೆಚ್ಚು ದಿನಗಳ ಕಾಲ ನಡೆಸುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸದ್ಯಕ್ಕೆ ಬೆಳಗಾವಿಯಲ್ಲಿ ಅಧಿವೇಶನವಿಲ್ಲ: ಈ ಮಧ್ಯೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕೆಂದು ಪತ್ರ ಬರೆದಿರುವ ಬಗ್ಗೆ ಅಧಿಕಾರಿಗಳು ಪ್ರಸ್ತಾಪಿಸಿದರು. ಈ ವೇಳೆ, ಸದ್ಯಕ್ಕಂತೂ ಅಲ್ಲಿ ಅಧಿವೇಶನ ನಡೆಸಲು ಆಗದು. ಜನವರಿಯಲ್ಲಿ ಜಂಟಿ ಅಧಿವೇಶನ ಬೇಕಾದರೂ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಅಷ್ಟರಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿ, ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಾರ್ಯಕ್ಕೆ ಚಾಲನೆ ನೀಡಿ. ಸಮಸ್ಯೆ ಇಲ್ಲ ಎಂದಾದರೆ ಜನವರಿಯಲ್ಲಿ ಅಲ್ಲೇ ಅಧಿವೇಶನ ನಡೆಸೋಣ ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ವಿತರಣೆ ಹಾಗೂ ಪುನರ್ವಸತಿ ಚುರುಕುಗೊಳ್ಳದೆ ಬೆಳಗಾವಿ ಅಥವಾ ಬೆಂಗಳೂರಿನಲ್ಲಿ ಅಧಿವೇಶನ ನಡೆಸಿದರೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿ ಬೀಳುತ್ತವೆ.

ಹೀಗಾಗಿ, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮೊತ್ತದಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಚುರುಕುಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಮಧ್ಯೆ, ಕೇಂದ್ರದಿಂದ ನೆರೆ ಪರಿಹಾರ ಈ ವಾರಾಂತ್ಯದೊಳಗೆ ಬಿಡುಗಡೆ ಯಾಗುವ ನಿರೀಕ್ಷೆ ಇರುವುದರಿಂದ ಪರಿಹಾರದ ಮೊತ್ತ ಬಂದ ತಕ್ಷಣ ಪುನರ್ವಸತಿ ಕಾಮಗಾರಿ ಕೈಗೆತ್ತಿಕೊಳ್ಳಲು ಅನುವಾಗುವಂತೆ ಕ್ರಿಯಾ ಯೋಜನೆ ರೂಪಿಸಲು ಸಹ ಸಿಎಂ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ ಎಂದು ಹೇಳಲಾಗಿದೆ.

Advertisement

“ಪ್ರಧಾನಿ ಜತೆ ಮಾತನಾಡಲು ಧೈರ್ಯ ಇಲ್ಲದಿದ್ದರೆ ಹೇಳಿ, ನಾವೂ ಬರುತ್ತೇವೆ’
ಬೆಂಗಳೂರು: ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಿಮಗೆ ಧೈರ್ಯ ಇಲ್ಲ ಎಂದಾದರೆ ಹೇಳಿ ಎಂದು ಪ್ರಶ್ನಿಸಿದ್ದಾರೆ. “ಮಾನ್ಯ ಯಡಿಯೂರಪ್ಪ ಅವರೇ, ನಿಮಗೆ ಹಾಗೂ 25 ಬಿಜೆಪಿ ಸಂಸದರಿಗೆ ಪ್ರಧಾನಿ ಜತೆ ರಾಜ್ಯದ ನೆರೆ ಪರಿಸ್ಥಿತಿ ಕುರಿತು ಗಟ್ಟಿಯಾಗಿ ಮಾತನಾಡುವ ಧೈರ್ಯವಿಲ್ಲ ಎಂದಾದರೆ ನಾವೂ ನಿಮ್ಮ ಜತೆ ದೆಹಲಿಗೆ ಬರುತ್ತೇವೆ. ಸರ್ವ ಪಕ್ಷ ನಿಯೋಗದ ಜತೆ ಪ್ರಧಾನಿಯವರನ್ನು ಭೇಟಿ ಮಾಡೋಣ’ ಎಂದು ಟ್ವೀಟ್‌ ಮಾಡಿದ್ದಾರೆ. ಜತೆಗೆ, ರಾಜ್ಯದಲ್ಲಿರುವುದು ತುಘಲಕ್‌ ಸರ್ಕಾರ ಮಾತ್ರ ಅಂತ ಅಂದುಕೊಂಡಿದ್ದೆ. ಆದರೆ, ಈ ಸರ್ಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲ. ನೆರೆ ಬಂದು ಒಂದೂವರೆ ತಿಂಗಳಾದರೂ ನಿರಾಶ್ರಿತರಿಗೆ ಸೂಕ್ತ ವಸತಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ್ದಾರೆ.

ಪ್ರವಾಹ ಪರಿಹಾರಕ್ಕಾಗಿ 500 ಕೋಟಿ ಬಿಡುಗಡೆ
ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರವಾಹದಿಂದ ಹಾನಿಗೊಳಗಾಗಿರುವ ಸ್ವತ್ತುಗಳ ಪುನರ್‌ ಸ್ಥಾಪನೆ, ರಸ್ತೆ, ಶಾಲಾ ಕಟ್ಟಡ ಸೇರಿ ಮೂಲ ಸೌಕರ್ಯ ಕಾಮಗಾರಿಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅತಿ ಹೆಚ್ಚು ಪ್ರವಾಹಕ್ಕೆ ತುತ್ತಾಗಿರುವ ಬೆಳಗಾವಿ ಜಿಲ್ಲೆಗೆ 200 ಕೋಟಿ ರೂ., ಬಾಗಲಕೋಟೆಗೆ 50 ಕೋಟಿ, ಚಿಕ್ಕಮಗಳೂರು -35 ಕೋಟಿ, ಉ.ಕನ್ನಡ-25 ಕೋಟಿ, ದಕ್ಷಿಣ ಕನ್ನಡ -35 ಕೋಟಿ, ಧಾರವಾಡ-49 ಕೋಟಿ, ಗದಗ-10, ಹಾವೇರಿ 35, ಹಾಸನ-15 ಕೋಟಿ, ಕೊಡಗು-10 ಕೋಟಿ, ಮೈಸೂರು-30 ಕೋಟಿ, ಉಡುಪಿ-25 ಕೋಟಿ, ವಿಜಯಪುರಕ್ಕೆ 40 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒಂದು ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲಾ ಎಂದು ಆರೋಪ ಮಾಡುತ್ತಿದ್ದಾರೆ. ಹೌದು ನಾವು ಪೈಸೆ ಬಿಡುಗಡೆ ಮಾಡಿಲ್ಲ. ನಾವು ರೂಪಾಯಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.  ಮೂಡಿಗೆರೆಯಲ್ಲಿ 353 ಎಕರೆ ಜಮೀನು ಗುರುತು ಮಾಡಿದ್ದೇವೆ. ಭೂ ಕುಸಿತವಾಗಿರುವ ಪ್ರದೇಶವನ್ನು ಸರ್ಕಾರಿ ಜಮೀನಾಗಿ ಮಾರ್ಪಾಡು ಮಾಡುತ್ತೇವೆ. ಮೂಡಿಗೆರೆ ಹೋಬಳಿಯಲ್ಲಿ ಜಮೀನು ಗುರುತು ಮಾಡಿದ್ದೇವೆ. ಕೊಡಗಿನಲ್ಲೂ ಇದೇ ಮಾದರಿಯಲ್ಲಿ ಜಮೀನು ಕೊಡಲಿದ್ದೇವೆ. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ವಿಳಂಬಕ್ಕೆ ತಾಂತ್ರಿಕ ಕಾರಣ ಉಂಟಾಗಿದ್ದು, ಒಂದು ವಾರದಲ್ಲಿ ಕೇಂದ್ರದಿಂದ ಪರಿಹಾರ ಹಣ ಬಿಡುಗಡೆಯಾಗಲಿದೆ. ಅದು ಬಂದ ತಕ್ಷಣ ಬೆಳೆ ವಿಮೆ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಪೌತಿ ಅಭಿಯಾನ: ರಾಜ್ಯದಲ್ಲಿ ರೈತರಿಗೆ ಪಿತ್ರಾರ್ಜಿತ ಆಸ್ತಿ ವರ್ಗಾಯಿಸುವ ಪೌತಿ ಖಾತೆ ಮಾಡುವುದು ಬಾಕಿ ಇದೆ. ಅದಕ್ಕಾಗಿ ರಾಜ್ಯಾದ್ಯಂತ ಪೌತಿ ಖಾತೆ ಆಂದೋಲನ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಹಿಂದಿನ ಸರ್ಕಾರ ಇದ್ದಾಗ ಅಂತ್ಯಸಂಸ್ಕಾರ ಕ್ಕಾಗಿ ಬಡವರಿಗೆ ಐದು ಸಾವಿರ ರೂ.ನೀಡಲಾ ಗುತ್ತಿತ್ತು. ಆ ಮೊತ್ತವನ್ನು ನಿಧನ ಹೊಂದಿದ 24 ತಾಸುಗಳಲ್ಲಿ ಕೊಡಬೇಕು. ಆದರೆ, ಆ ಹಣವನ್ನು ಸರಿಯಾಗಿ ನೀಡುತ್ತಿಲ್ಲ. ರಾಜ್ಯದಲ್ಲಿ 84,394 ಪ್ರಕರಣ ಬಾಕಿ ಇದ್ದು, 72.74 ಕೋಟಿ ರೂ.ಹಣ ಬಾಕಿ ನೀಡಬೇಕಿದೆ.

ಅದಕ್ಕಾಗಿ ಮೊದಲ ಹಂತದಲ್ಲಿ ಈಗ 18 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ 18 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿ 65 ಲಕ್ಷ ಜನಕ್ಕೆ 7,200 ಕೋಟಿ ರೂ.ಪಿಂಚಣಿ ಕೊಡಲಾಗು ತ್ತಿದೆ. ಇದರಲ್ಲೂ ಬೋಗಸ್‌ ನಡೆಯುತ್ತಿದೆ. ಇದನ್ನು ಆಧಾರ್‌ಗೆ ಲಿಂಕ್‌ ಮಾಡುವ ಮೂಲಕ ಬೋಗಸ್‌ ಪಿಂಚಣಿದಾರರನ್ನು ಪತ್ತೆ ಹಚ್ಚಲಾಗುವುದು ಎಂದು ಹೇಳಿದರು.

“ಸ್ವಾಮೀಜಿ ಫೋನ್‌ ಟ್ಯಾಪ್‌ ಮಾಡಿದ್ದಾರೆ’
ಬೆಂಗಳೂರು: ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್‌ ಟ್ಯಾಪ್‌ ಮಾಡಿದ್ದಾರೆ. ಇದೊಂದು ಗಂಭೀರ ವಿಚಾರ. ಸ್ವಾಮೀಜಿ ಫೋನ್‌ ಟ್ಯಾಪ್‌ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಾಮೀಜಿ ಯವರನ್ನು ರಾಜಕೀಯಕ್ಕೆ ಎಳೆದು ಫೋನ್‌ ಟ್ಯಾಪ್‌ ಮಾಡಿದ್ದು ಸರಿಯಲ್ಲ. ಫೋನ್‌ ಟ್ಯಾಪ್‌ ಮಾಡಿದವರಿಗೆ ನಾಚಿಕೆಯಾಗಬೇಕು. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಆದಿಚುಂಚನಗಿರಿ ಸ್ವಾಮೀ ಜಿಯ ಬಗ್ಗೆ ಉದಾಹರಣೆ ನೀಡಿದ್ದೇನೆ. ಇನ್ನು ಎಷ್ಟು ಜನ ಸ್ವಾಮೀಜಿಗಳ ಫೋನ್‌ ಕದ್ದಾಲಿಸಿದ್ದಾರೆಯೋ ಗೊತ್ತಿಲ್ಲ. ಎಲ್ಲ ಸ್ವಾಮೀಜಿಗಳ ಕ್ಷಮೆ ಕೇಳುತ್ತೇನೆ. ಈ ಪ್ರಕರಣದಲ್ಲಿ ಯಾರ ತಲೆಯ ಮೇಲೆ ಗೂಬೆ ಕೂರುತ್ತದೆಯೋ, ಯಾರ ತಲೆಯ ಮೇಲೆ ಕಾಗೆ ಕೂರುತ್ತದೆಯೋ ಇನ್ನೆರಡು ದಿನ ಕಾದು ನೋಡಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next