Advertisement

Karnataka: ಎಲ್ಲರಿಗೂ ಗ್ಯಾರಂಟಿ ಲಾಭ ತಲುಪಿಸಿ- ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತಾಕೀತು

10:51 PM Nov 22, 2023 | Team Udayavani |

ಬೆಂಗಳೂರು: ” ಗ್ಯಾರಂಟಿಗಳು ಜನರಿಗೆ ತಲುಪುತ್ತಲೇ ಇಲ್ಲ. ಸರ್ಕಾರದ ನುಡಿದಂತೆ ನಡೆಯುತ್ತಿಲ್ಲ” ಎಂದು ಪ್ರತಿಪಕ್ಷಗಳ ಆರೋಪದ ಬೆನ್ನಲ್ಲೇ ನಾಲ್ಕೂ ಯೋಜನೆಗಳ ಇಲಾಖೆಗಳ ಅಧಿಕಾರಿಗಳ ಜತೆಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಸಭೆ ನಡೆಸಿದ್ದಾರೆ. ಯಾರೊಬ್ಬ ಫ‌ಲಾನುಭವಿಯೂ “ಗ್ಯಾರಂಟಿ’ಗಳಿಂದ ವಂಚಿತವಾಗಬಾರದು. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಬಗೆಹರಿಸಿ, ಸೌಲಭ್ಯ ತಲುಪುವಂತೆ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಸೇರಿದಂತೆ ನಾಲ್ಕೂ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಯೋಜನೆಗಳು ಸಂಪೂರ್ಣವಾಗಿ ಫ‌ಲಾನುಭವಿಗಳಿಗೆ ತಲುಪಲು ಡಿಸೆಂಬರ್‌ ಗಡುವು ವಿಧಿಸಿದರು. ಉಳಿದ ಯೋಜನೆಗಳಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳಿಗೆ ಸೂಚಿಸಿದರು.

ವಿಶೇಷವಾಗಿ “ಗೃಹಲಕ್ಷ್ಮೀ’ಯಲ್ಲಿ ಖಾತೆ ಮಾಹಿತಿಯಲ್ಲಿ ಗೊಂದಲ, ಆಧಾರ್‌ ಲಿಂಕ್‌ ಆಗದಿರುವುದು ಒಳಗೊಂಡಂತೆ ಹಲವು ಕಾರಣಗಳಿಂದ ನಗದು ವರ್ಗಾವಣೆ ತೊಡಕಾಗಿದೆ. ಡಿಸೆಂಬರ್‌ ಒಳಗೆ ಸಮಸ್ಯೆಗಳು ಬಗೆಹರಿದು, ಎಲ್ಲ ಅರ್ಹ ಫ‌ಲಾನುಭವಿಗಳ ಖಾತೆಗೆ ನಗದು ಜಮೆ ಆಗಬೇಕು. ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳತಕ್ಕದ್ದು’ ಎಂದು ನಿರ್ದೇಶನ ನೀಡಿದರು.

“ಗೃಹಲಕ್ಷ್ಮೀ ಅದಾಲತ್‌”ಗೆ ಸೂಚನೆ
ಕೆಲವೆಡೆ ಅಂಗನವಾಡಿ ಕಾರ್ಯಕರ್ತೆಯರು ಫ‌ಲಾನುಭವಿಗಳನ್ನು ಬ್ಯಾಂಕ್‌ಗೆà ಕರೆದೊಯ್ದು ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಫ‌ಲಾನುಭವಿಗಳು ಬಿಟ್ಟುಹೋಗಿದ್ದರೆ ಅಥವಾ ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಲಿಂಕ್‌ ಆಗದಿರುವಂತಹ ಸಮಸ್ಯೆಗಳಿಗೆ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಗೃಹಲಕ್ಷ್ಮೀ ಅದಾಲತ್‌ ನಡೆಸಬೇಕು. ಆ ಮೂಲಕ ಸ್ಥಳೀಯವಾಗಿ ಬಗೆಹರಿಸಬೇಕು ಎಂದು ಆದೇಶಿಸಿದರು.

2ನೇ ಹಿರಿಯ ವ್ಯಕ್ತಿ ಖಾತೆಗೆ ಹಣ?
“ಅನ್ನಭಾಗ್ಯ’ ದಡಿ ಈವರೆಗೆ 1.10 ಕೋಟಿ ಕಾರ್ಡ್‌ದಾರರಿಗೆ ನೇರ ನಗದು ವರ್ಗಾವಣೆ ಮೂಲಕ 2,444.11 ಕೋಟಿ ರೂ. ಪಾವತಿಸಲಾಗಿದೆ. 12.95 ಲಕ್ಷ ಪಡಿತರ ಚೀಟಿದಾರರ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡುವ ಮೂಲಕ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. 2.60 ಲಕ್ಷ ಹೊಸ ಖಾತೆಗಳನ್ನು ಅಂಚೆ ಕಚೇರಿಗಳಲ್ಲಿ ತೆರೆಯಲಾಗಿದೆ. 7.67 ಲಕ್ಷ ಅನರ್ಹ ಪಡಿತರ ಚೀಟಿಗಳ ವಿಷಯದಲ್ಲಿ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಯಜಮಾನರು ಊರಿನಲ್ಲಿ ಇಲ್ಲದ ಕಾರಣ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಮುಖ್ಯಮಂತ್ರಿ ಗಮನಕ್ಕೆ ತಂದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಎರಡನೇ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸಲು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸಬೇಕು. ಒಟ್ಟಾರೆ ಡಿಸೆಂಬರ್‌ 31ರ ಒಳಗೆ ಎಲ್ಲ ಅರ್ಹರಿಗೆ ಸೌಲಭ್ಯ ದೊರಕಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು. “ಗೃಹಜ್ಯೋತಿ’ ಅಡಿ 1.62 ಕೋಟಿ ಜನ ನೋಂದಾಯಿಸಿಕೊಂಡಿದ್ದು, 1.50 ಕೋಟಿ ಕುಟುಂಬಗಳಿಗೆ ಸೌಲಭ್ಯ ದೊರೆಯುತ್ತಿದೆ. ಆಗಸ್ಟ್‌ನಿಂದ ಈವರೆಗೆ 2,900 ಕೋಟಿ ರೂ. ಭರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆಗ ಮುಖ್ಯಮಂತ್ರಿ, “ಕುಟೀರಜ್ಯೋತಿ, ಭಾಗ್ಯಜ್ಯೋತಿ, ಅಮೃತ ಜ್ಯೋತಿ ಯೋಜನೆ ಫ‌ಲಾನುಭವಿಗಳು ಯಾವುದೇ ಕಾರಣಕ್ಕೂ ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ಶಕ್ತಿ ಯೋಜನೆ ಜಾರಿಗೊಂಡ ನಂತರದಿಂದ ಈವರೆಗೆ 99.75 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯ ಪಡೆದಿದ್ದಾರೆ. ಇನ್ನೆರಡು ದಿನಗಳಲ್ಲಿ ನೂರು ಕೋಟಿ ದಾಟಲಿದೆ. ಪ್ರತಿ ತಿಂಗಳ ಪ್ರಯಾಣಿಕರ ಸಂಖ್ಯೆ ಈ ಮೊದಲು ಅಂದರೆ 2023ರ ಏಪ್ರಿಲ್‌ನಲ್ಲಿ 84.17 ಲಕ್ಷ ಇತ್ತು. ಯೋಜನೆ ನಂತರ 1.08 ಕೋಟಿಯಿಂದ 1.15 ಕೋಟಿವರೆಗೆ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ರಾಜ್ಯದಲ್ಲಿ ನಾಲ್ಕೂ ಸಾರಿಗೆ ನಿಗಮಗಳಿಗೆ ಒಟ್ಟು 828 ಸಾಮಾನ್ಯ ಮತ್ತು 145 ವಿದ್ಯುತ್‌ಚಾಲಿತ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಬಸ್‌ಗಳ ಖರೀದಿ ಪ್ರಕ್ರಿಯೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next