Advertisement

ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ: ಸಿಎಂ

10:45 AM May 11, 2017 | |

ಬೆಂಗಳೂರು: ಸರ್ಕಾರದ ಎಲ್ಲ ಯೋಜನೆಗಳು ಅರ್ಹ ಫ‌ಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಪಂಚಾಯ್ತಿಗಳ ಮೇಲಿದೆ. ಈ ನಿಟ್ಟಿನಲ್ಲಿ ಅತಿ ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಚಾಯ್ತಿ ಸದಸ್ಯರಿಗೆ ಕರೆ ನೀಡಿದರು.

Advertisement

ನಗರದ ಅರಮನೆ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ “ಕರ್ನಾಟಕ ಪಂಚಾಯತ್‌ರಾಜ್‌ ಕಾಯ್ದೆ-1993’ರ ರಜತ ಮಹೋತ್ಸವ ಮತ್ತು ಸರ್ಕಾರಕ್ಕೆ ನಾಲ್ಕು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಧನೆಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮದ ಸಮಸ್ಯೆಗಳು ಆಯಾ ಗ್ರಾಮದ ಪ್ರತಿನಿಧಿಯೇ ಬಗೆಹರಿಸಬೇಕು ಎನ್ನುವವನು ನಾನು. ಈ ಹಿನ್ನೆಲೆಯಲ್ಲಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಜಿ.ಪಂ. ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ನೀಡಲಾಗಿದೆ. ಗೌರವಧನ ಹೆಚ್ಚಳ ಮಾಡಲಾಗಿದೆ. ಕಡ್ಡಾಯ ಮತದಾನ ಜಾರಿಗೊಳಿಸಲಾಗಿದೆ. ತಮಗೆ ನೀಡಿದ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

“ಪಂಚಾಯತ್‌ ರಾಜ್‌ ಕಾಯ್ದೆ-1993’ಯಿಂದ ಅಧಿಕಾರ ಹಂಚಿಕೆಯಾಯಿತು. ಹಿಂದುಳಿದವರು, ಮಹಿಳೆಯರು, ಶೋಷಿತರೆಲ್ಲರ ಕೈಗೂ ಅಧಿಕಾರ ಸಿಕ್ಕಿತು. ಈ ನಿಟ್ಟಿನಲ್ಲಿ ಪಂಚಾಯತ್‌ ರಾಜ್‌ ಕಾಯ್ದೆಯು ಬಸವಣ್ಣನ ಕನಸಿನ ರೂಪವಾಗಿದೆ ಎಂದು ವಿಶ್ಲೇಷಿಸಿದ ಅವರು, ಗ್ರಾ.ಪಂ. ಸದಸ್ಯರೆಲ್ಲರೂ ನಿಯಮಿತವಾಗಿ ಗ್ರಾಮ ಸಭೆ, ವಾರ್ಡ್‌ ಸಭೆಗಳನ್ನು ಮಾಡಬೇಕು. ಜನವಸತಿ ಸಭೆಗಳನ್ನು ಕೂಡ ನಡೆಸಿ, ಸಮಸ್ಯೆಗಳನ್ನು ಆಲಿಸಬೇಕು ಎಂದು ತಿಳಿಸಿದರು.

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬದಲಾವಣೆ ಬಯಸುವುದಿಲ್ಲ. ಆದ್ದರಿಂದ ಅಂದು ಈ ಕಾಯ್ದೆ ಜಾರಿಗೊಳಿಸುವಾಗ ಭ್ರಷ್ಟಾಚಾರದ ವಿಕೇಂದ್ರೀಕರಣ ಎಂದು ಕೆಲವರು ದೂರಿದರು. ಆದರೆ, ಭ್ರಷ್ಟಾಚಾರ ಕೇವಲ ಪಂಚಯ್ತಿ ಹಂತದಲ್ಲಿ ಇಲ್ಲ. ಹಳ್ಳಿಯಿಂದ ದಿಲ್ಲಿವರೆಗೂ ಹಬ್ಬಿದೆ. ಅದೇನೇ ಇರಲಿ, ಈಗಲೂ ಪಟ್ಟಭದ್ರ ಹಿತಾಸಕ್ತಿಗಳು ಈ ವಿಕೇಂದ್ರೀಕರಣ ವ್ಯವಸ್ಥೆಯನ್ನು ಸಹಿಸುವುದಿಲ್ಲ. ಅದಕ್ಕೆ ಕಿವಿಗೊಡಬಾರದು ಎಂದು ಕಿವಿಮಾತು ಹೇಳಿದರು.

Advertisement

ಕನಿಷ್ಠ ವಿದ್ಯಾರ್ಹತೆ ಬೇಕು
ಕೇಂದ್ರ ಸಾಂಖೀÂಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಪಂಚಾಯ್ತಿ ಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಬೇಕು ಎಂದು ಹೇಳಿದರು.

ತಾವೇ (ಜನಪ್ರತಿನಿಧಿಗಳು) ಜಾರಿ ಮಾಡಿದ ಆದೇಶಗಳನ್ನು ಓದಲು ಹಾಗೂ ಸ್ವತಃ ತಿಳಿದು, ನಿರ್ಣಯಗಳನ್ನು ತೆಗೆದುಕೊಳ್ಳಲು ಕನಿಷ್ಠ ವಿದ್ಯಾರ್ಹತೆ ಬೇಕಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಸಮಗ್ರ ಚಿಂತನೆ ನಡೆಸುವ ಅಗತ್ಯವಿದೆ. ಅಲ್ಲದೆ, ತಾಂತ್ರಿಕ ಶಿಕ್ಷಣವೂ ಬೇಕು ಎಂದರು.

ಇನ್ನು ಶೇ. 33ರಷ್ಟು ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಬಹುಮತದ ಬಲದಿಂದ ಆಗಬಾರದು. ಸಹಮತದ ಆಧಾರದಲ್ಲಿ ಜಾರಿಗೊಳಿಸಬೇಕು. ಅಂದಾಗ ಉದ್ದೇಶವೂ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

2,500 ಶುದ್ಧ ನೀರಿನ ಘಟಕಗಳು
ಸಚಿವ ಎಚ್‌.ಕೆ. ಪಾಟೀಲ ಮಾತನಾಡಿ, ಈಗಾಗಲೇ ರಾಜ್ಯಾದ್ಯಂತ 9,300 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇದರಿಂದ ಒಂದೂವರೆ ಕೋಟಿ ಗ್ರಾಮೀಣ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಈಗ ಮತ್ತೆ 2,500 ಘಟಕಗಳ ಸ್ಥಾಪನೆಗೆ ಮಂಜೂರಾತಿ ದೊರಕಿದೆ. ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

2017ರ ಅಕ್ಟೋಬರ್‌ 2ರ ವೇಳೆಗೆ ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಲಾಗುವುದು. ಇದಕ್ಕೆ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೈಜೋಡಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಸದ ಎಂ. ವೀರಪ್ಪ ಮೊಯಿಲಿ ಅವರನ್ನು ಸನ್ಮಾನಿಸಲಾಯಿತು. ಸಚಿವರಾದ ಎ. ಮಂಜು, ಎಚ್‌. ಆಂಜನೇಯ, ರುದ್ರಪ್ಪ ಲಮಾಣಿ, ವಿಧಾನ ಪರಿಷತ್‌ ಸದಸ್ಯ ನಾರಾಯಣಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮಣಿಗಳೇ ಇಲ್ಲ; ಸಿಎಂ ಬೇಸರ
ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡಲಾಗಿದೆ. ಆದಾಗ್ಯೂ ಪಂಚಾಯತ್‌ ರಾಜ್‌ ಕಾಯ್ದೆಯ ರಜತ ಮಹೋತ್ಸವದಲ್ಲಿ ಮಹಿಳಾ ಸದಸ್ಯರೇ ಕಾಣುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಪಂಚಾಯ್ತಿಗಳಲ್ಲಿ ಶೇ. 50ರಷ್ಟು ಮೀಸಲಾತಿ ನೀಡಿದರೂ ಸಮಾವೇಶದಲ್ಲಿ ಬರೀ ಪುರುಷರೇ ಇದ್ದಾರೆ. ಮಹಿಳಾ ಸದಸ್ಯರೇ ಇಲ್ಲ. ಇದು ನನ್ನ ವ್ಯಥೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಮಹಿಳಾ ಸದಸ್ಯರ ಪತಿಯಂದಿರೇ ಸಮಾವೇಶಕ್ಕೆ ಬಂದಿದ್ದೀರಿ ಅನಿಸುತ್ತೆ’ ಎಂದು ಚಟಾಕಿ ಹಾರಿಸಿದರು.

“ಸದಸ್ಯ ಆಗಿªದ್ರೆ ಶಾಸಕ ಆಗ್ತಿರ್ಲಿಲ್ಲ’
“1978-83ರಲ್ಲಿ ನಾನೂ ತಾಲ್ಲೂಕು ಅಭಿವೃದ್ಧಿ ಮಂಡಳಿ ಸದಸ್ಯನಾಗಿದ್ದೆ. ಅಂದು ಸದಸ್ಯನಾಗದಿದ್ದರೆ, ಮುಂದೆ ನಾನು ಶಾಸಕನಾಗುತ್ತಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಲುಕು ಹಾಕಿದರು.

“ಜನತಾದಳದಿಂದ 1978ರಲ್ಲಿ ಎಂಟು ಜನ ಮಂಡಳಿ ಸದಸ್ಯರಾಗಿದ್ದೆವು. ಆದರೆ, ಏಳು ಜನ ಕಾಂಗ್ರೆಸ್‌ಗೆ ಹೋದರು. ಉಳಿದವನು ನಾನೊಬ್ಬನೇ. ಹಾಗಾಗಿ ಪ್ರತಿಪಕ್ಷದ ನಾಯಕನೂ ನಾನೇ ಆಗಿದ್ದೆ. ಎಲ್ಲ ವಿಷಯಗಳ ಮೇಲೆ ನಾನೊಬ್ಬನೇ ಮಾತನಾಡಬೇಕಿತ್ತು. ಇದು ನನಗೆ ಮುಂದೆ ಶಾಸಕನಾಗಲು ನೆರವು ಕೂಡ ಆಯಿತು’ ಎಂದು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next