Advertisement

ಫಸಲ್‌ ಬಿಮಾ ಯೋಜನೆ ಸೌಲಭ್ಯ ರೈತರಿಗೆ ತಲುಪಿಸಿ

03:16 PM May 30, 2017 | Team Udayavani |

ಕಲಬುರಗಿ: ಪ್ರಧಾನಮಂತ್ರಿ ಫಸಲ ವಿಮಾ ಯೋಜನೆ ಸೌಲಭ್ಯವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ಶ್ರಮಿಸಬೇಕು ಎಂದು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಹೇಳಿದರು.

Advertisement

ತಾಲೂಕಿನ ಕೋಟನೂರ(ಡಿ) ಗ್ರಾಮದಲ್ಲಿ 47 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ಸಿಗುವ ವಿವಿಧ ಸಹಾಯ ಸೌಲಭ್ಯಗಳ ಮಾಹಿತಿ, ತಂತ್ರಜಾನ ಮುಂತಾದವುಗಳನ್ನು ತಲುಪಿಸುವಲ್ಲಿ ಕೃಷಿ ಅಧಿಕಾರಿಗಳು ಮತ್ತು ಕೃಷಿಕ ಸಮಾಜದವರು ತುರ್ತಾಗಿ ಸ್ಪಂದಿಸುವ ಕಾರ್ಯಕೈಗೊಳ್ಳಬೇಕು ಎಂದು ಹೇಳಿದರು. 

ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಮಾತನಾಡಿ, ವಾಣಿಜ್ಯ ಬ್ಯಾಂಕುಗಳ ಮೂಲಕ  ರೈತರು ಪಡೆದ ಬೆಳೆಸಾಲವನ್ನು ಕೇಂದ್ರ ಸರ್ಕಾರ ಹಾಗೂ ಸಹಕಾರ ಸಂಘಗಳ ಮೂಲಕ ರೈತರು ಪಡೆದ ಬೆಳೆ ಸಾಲದ ಬಡ್ಡಿಯನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ಹೇಳಿದರು.

ನಬಾರ್ಡ್‌ ಬ್ಯಾಂಕ್‌ ಮ್ಯಾನೇಜರ್‌ ರಮೇಶ ಮಾತನಾಡಿ, ಪ್ರತಿಯೊಂದು ಹಂತದಲ್ಲಿ ರೈತರಿಗೆ ಮಾಹಿತಿ ಮತ್ತು ತಂತ್ರಜ್ಞಾನದ ತಿಳಿವಳಿಕೆ  ನೀಡುವುದು ಅವಶ್ಯಕವಾಗಿದೆ. ನಬಾರ್ಡ್‌ ಬ್ಯಾಂಕ್‌ನಿಂದ ಕಲಬುರಗಿ ಜಿಲ್ಲೆಯ ರಸ್ತೆ, ಶಾಲೆ, ಹನಿ ಮತ್ತು ತುಂತುರ ನೀರಾವರಿ ಮುಂತಾದ ವಿವಿಧ ಯೋಜನೆಗಳ  ಅನುಷ್ಠಾನಕ್ಕಾಗಿ 1048 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದು ಹೇಳಿದರು. 

ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಕರ್ನಾಟಕ ತೊಗರಿ ಮಂಡಳಿ  ಅಧ್ಯಕ್ಷ ಭಾಗನಗೌಡ ಪಾಟೀಲ ಸಂಕನೂರ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ತಾಪಂ ಸದಸ್ಯ ಆನಂದ, ಕೃಷಿ  ವಿಶ್ವವಿದ್ಯಾಲಯದ ಅಧಿಕಾರಿ ಸುರೇಶ ಹೊಳ್ಳಾ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಎಚ್‌. ಮೊಕಾಶಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಸಹಾಯಕ ಕೃಷಿ  ನಿರ್ದೇಶಕ ಚಂದ್ರಕಾಂತ ಜೇವಣಗಿ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next