ಪಾವಗಡ: ಲೋಕಸಭಾ ಚುನಾವಣೆ ಪ್ರಯುಕ್ತ ಕೇಂದ್ರ ವಲಯದ ಐಜಿಪಿ ಕೆ.ವಿ.ಶರತ್ ಚಂದ್ರ ತಾಲೂಕಿನ ರಂಗಸಮುದ್ರ, ತಿರುಮಣಿ, ವೈ.ಎನ್.ಹೊಸಕೋಟೆ, ಲಿಂಗದಹಳ್ಳಿ, ವೆಂಕಟಾಪುರ ಮುಂತಾದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿ ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆ ಬುಧವಾರ ಪರಿಶೀಲಿಸಿದರು.
ರಂಗಸಮುದ್ರ ಗ್ರಾಮಸ್ಥರ ಬಳಿ ಮಾತನಾಡಿದ ಐಜಿಪಿ ಈ ಭಾಗದಲ್ಲಿ ಯಾವುದೇ ಗಲಭೆ ಅಥವಾ ಇತರೆ ಸಮಸ್ಯೆ, ಪ್ರಕರಣಗಳು ನಡೆದಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು.
ಗ್ರಾಮಸ್ಥರು ರಂಗಸಮುದ್ರ ಗ್ರಾಮ ಮದ್ಯ ಮುಕ್ತ ಗ್ರಾಮವಾಗಿದೆ. ಕಳೆದ 2ವರ್ಷಗಳಿಂದ ಇಲ್ಲಿ ಯಾರು ಮದ್ಯ ಮಾರಾಟ ಮಾಡುತ್ತಿಲ್ಲ. ಇತರೆ ಯಾವುದೇ ಚಟುವಟಿಕೆಗಳು ಇಲ್ಲಿ ನಡೆಯುತ್ತಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಐಜಿಪಿ ಕೆ.ವಿ.ಶರತ್ ಚಂದ್ರ ಮಾತನಾಡಿ, ತಾಲೂಕಿನ ವಿವಿಧ ಕಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಮತ್ತು ಚುನಾವಣೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ನಾಲ್ಕು ಹೋಬಳಿಗಳ ಕೆಲ ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ ಎಂದರು.
ಎಸ್ಪಿ ಕೋನ ವಂಶಿಕೃಷ್ಣ, ಚುನಾವಣಾಧಿಕಾರಿ ಕೃಷ್ಣಪ್ಪ, ಗ್ರೇಡ್ 2 ತಹಶೀಲ್ದಾರ್ ಪ್ರಕಾಶ್, ಮಧುಗಿರಿ ಡಿವೈಎಸ್ಪಿ ಶ್ರೀನಿವಾಸ್, ಪಾವಗಡ ಸಿಪಿಐ ವೆಂಕಟೇಶ್, ತಿರುಮಣಿ ಸಿಪಿಐ ಶ್ರೀಶೈಲಮೂರ್ತಿ, ತಾಪಂ ಎಡಿ ರಂಗನಾಥ್, ಪಿಡಿಒ ರಂಗಧಾಮಯ್ಯ ಇತರರಿದ್ದರು.