Advertisement

ದೆಹಲಿಯೀಗ “ಡೇಂಜರ್‌ ಝೋನ್‌’; ಅಪಾಯಕಾರಿ ಸ್ಥಿತಿಗೆ ವಾಯು ಗುಣಮಟ್ಟ

09:10 PM Nov 06, 2021 | Team Udayavani |

ನವದೆಹಲಿ: ದೀಪಾವಳಿಯ ಬೆನ್ನಲ್ಲೇ ದೆಹಲಿಯ ವಾಯು ಗುಣಮಟ್ಟ “ಅಪಾಯಕಾರಿ’ ಮಟ್ಟ ತಲುಪಿದೆ. ವಿಷಕಾರಿ ಅನಿಲವು ದೆಹಲಿಯ ವಾತಾವರಣದಲ್ಲಿ ಸೇರಿಕೊಂಡಿದ್ದು, ಕಣ್ಣ ಮುಂದಿರುವ ವಸ್ತುಗಳೇ ಗೋಚರಿಸದಷ್ಟು ದಟ್ಟವಾಗಿ ಹೊಗೆ ಆವರಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಕೆಲವೇ ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯೂ ತೀವ್ರಗತಿಯಲ್ಲಿ ಏರಿಕೆಯಾಗಬಹುದು ಎಂದು ಏಮ್ಸ್‌ ನಿರ್ದೇಶಕ ರಣದೀಪ್‌ ಗುಲೇರಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಗಂಭೀರ ಕೆಟಗರಿಗೆ:
ದೆಹಲಿಯ ವಾಯು ಗುಣಮಟ್ಟವು ಶನಿವಾರ “ಗಂಭೀರ’ ಕೆಟಗರಿಗೆ ತಲುಪಿದ್ದು, ವಾಯುಗುಣಮಟ್ಟ ಸೂಚ್ಯಂಕ 533 ಆಗಿದೆ. ಈ ಗಾಳಿಯು ಮನುಷ್ಯನ “ಉಸಿರಾಟಕ್ಕೆ ಯೋಗ್ಯ’ವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಕನ್ನಾಟ್‌ಪ್ಲೇಸ್‌ನಲ್ಲಿ ಅಳವಡಿಸಲಾಗಿರುವ ಹೊಗೆ ಟವರ್‌ಗಳು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ.

ಹಲವು ಕ್ರಮಗಳು:
ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು, ಎಲ್ಲ ರಸ್ತೆಗಳಲ್ಲೂ ನೀರನ್ನು ಚಿಮುಕಿಸುವ ಕೆಲಸ ಆರಂಭಿಸಿದೆ. ನಿಯಮ ಉಲ್ಲಂಘಿ ಸಿರುವ 92 ನಿರ್ಮಾಣ ಕಾಮಗಾರಿಗಳಿಗೆ ಶನಿವಾರ ನಿಷೇಧ ಹೇರಲಾಗಿದೆ.

ಇದೇ ವೇಳೆ, ಆಗ್ರಾದಲ್ಲೂ ವಾಯು ಗುಣಮಟ್ಟ ಸೂಚ್ಯಂಕ 380ಕ್ಕೆ ತಲುಪಿದ್ದು, ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ, ಜನರು ಬೆಳಗ್ಗೆ ಮತ್ತು ಸಂಜೆ ವಾಕಿಂಗ್‌ ಹೋಗದಂತೆ ಹಾಗೂ ಮನೆಯಿಂದ ಹೊರಬರಬೇಕಿದ್ದರೆ ಮುಖಕ್ಕೆ ಸುರಕ್ಷತಾ ಕವಚ ಧರಿಸುವಂತೆ ತಜ್ಞರು ಸೂಚಿಸಿದ್ದಾರೆ.

ಕೋವಿಡ್‌ಗಿಂತಲೂ ಅಪಾಯಕಾರಿ
ದೆಹಲಿಯು ಈಗ ಗ್ಯಾಸ್‌ ಛೇಂಬರ್‌ನಂತಾಗಿದ್ದು, ಭಾರೀ ಮಳೆ ಹಾಗೂ ಗಾಳಿ ಬೀಸಿದರಷ್ಟೇ ದೆಹಲಿಯ ಜನರು ಇದರಿಂದ ಪಾರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏಮ್ಸ್‌ ಮುಖ್ಯಸ್ಥ ರಣದೀಪ್‌ ಗುಲೇರಿಯಾ ಮಾತನಾಡಿ, “ದೆಹಲಿಯ ಜನರ ಶ್ವಾಸಕೋಶವು ಕಪ್ಪಾಗಿ ಬದಲಾಗಿದೆ. ಇಲ್ಲಿನ ಜನರ ಜೀವಿತಾವಧಿ ಕೂಡ ಇಳಿಕೆಯಾಗಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ದೆಹಲಿಯ ಗಾಳಿಯು ಸಿಗರೇಟಿಗಿಂತಲೂ ಹಾನಿಕಾರಕವಾಗಿದ್ದು, ಮುಂದೆ ಕೊರೊನಾ ಸೋಂಕು ಪ್ರಕರಣ ಹೆಚ್ಚಲೂ ಇದು ಕಾರಣವಾಗಬಹುದು’ ಎಂದಿದ್ದಾರೆ. ಜತೆಗೆ, ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸಿದ್ದು, ಹಬ್ಬಗಳ ವೇಳೆ ವಾಹನಗಳ ಸಂಚಾರ ಹೆಚ್ಚಳ ಕೂಡ ಮಾಲಿನ್ಯಕ್ಕೆ ಕಾರಣವಾಯಿತು ಎಂದೂ ಅವರು ಹೇಳಿದ್ದಾರೆ.

Advertisement

ಇದನ್ನೂ ಓದಿ:ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ವಿನಾಕಾರಣ ಅಪಪ್ರಚಾರ: ರಾಮಲಿಂಗಾರೆಡ್ಡಿ

ಕನ್ನಾಟ್‌ಪ್ಲೇಸ್‌ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿರುವ ಹೊಗೆ ಟವರ್‌, ವಾಯುಮಾಲಿನ್ಯ ಸಮಸ್ಯೆಗೆ ಪರಿಹಾರವಲ್ಲ ಎಂಬುದು ಸಾಬೀತಾಯಿತು. ಇಂಥದ್ದರ ಮೇಲೆ ಸುಖಾಸುಮ್ಮನೆ ಹಣ ವ್ಯಯ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಮಾಲಿನ್ಯವನ್ನು ಮೂಲದಿಂದ ನಿಯಂತ್ರಿಸಲು ಆ ಹಣ ವೆಚ್ಚ ಮಾಡಬೇಕು.
– ಸುನೀಲ್‌ ದಹಿಯಾ, ಸೆಂಟರ್‌ ಫಾರ್‌ ರಿಸರ್ಚ್‌ ಆನ್‌ ಎನರ್ಜಿ ಆ್ಯಂಡ್‌ ಕ್ಲೀನ್‌ ಏರ್‌

ಆಪ್‌-ಬಿಜೆಪಿ ರಾಜಕೀಯ ವಾಕ್ಸಮರ
ದೆಹಲಿ ವಾಯುಮಾಲಿನ್ಯವು ಆಡಳಿತಾರೂಢ ಆಮ್‌ ಆದ್ಮಿ ಪಕ್ಷ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. “ವಾಯುಮಾಲಿನ್ಯದ ಬಗ್ಗೆ ಅರಿವಿದ್ದ ಸಾಕಷ್ಟು ಸಂಖ್ಯೆಯ ಜನರು ದೀಪಾವಳಿ ಹಬ್ಬದಂದು ಪಟಾಕಿಯಿಂದ ದೂರವುಳಿದಿದ್ದರು. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸಿದರು’ ಎಂದು ಪರಿಸರ ಸಚಿವ ಗೋಪಾಲ್‌ ರಾಯ್‌ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಪಟಾಕಿಗೆ ನಿಷೇಧ ಹೇರಿದ್ದರೂ ಕೆಲವರು ಸುಡುಮದ್ದುಗಳನ್ನು ಸಿಡಿಸಿದರು. ಇದರ ಜೊತೆಗೆ ಪಕ್ಕದ ರಾಜ್ಯಗಳಲ್ಲಿ ಕಳೆ ಸುಟ್ಟಿದ್ದರಿಂದಲೂ ವಾಯುಮಾಲಿನ್ಯ ಉಂಟಾಯಿತು ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಮಿತ್‌ ಮಾಳವೀಯ, “ಪಟಾಕಿಗಿಂತಲೂ ಮೊದಲೇ ದೆಹಲಿಯ ವಾಯುಗುಣಮಟ್ಟ ಅಪಾಯಕಾರಿಯಾಗಿತ್ತು. ಈಗ ವಾಯುಗುಣಮಟ್ಟ ಹಾಳಾಗಲು ದೀಪಾವಳಿಯೇ ಕಾರಣ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ’ ಎಂದಿದ್ದಾರೆ. ಇದೇ ವೇಳೆ, “ಸಚಿವ ಗೋಪಾಲ್‌ ರಾಯ್‌ ಅವರ ಆಲೋಚನೆಯು ಮೊಘಲ್‌ ದೊರೆ ಔರಂಗಜೇಬ್‌ನಿಂದ ಪ್ರಭಾವಿತವಾಗಿದ್ದು. ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ದೆಹಲಿ ಸರ್ಕಾರ ವಿಫ‌ಲವಾಗಿದೆ’ ಎಂದು ಬಿಜೆಪಿ ವಕ್ತಾರ ಪ್ರವೀಣ್‌ ಶಂಕರ್‌ ಕಪೂರ್‌ ಆರೋಪಿಸಿದ್ದಾರೆ.

ಪಟಾಕಿ ಸ್ಫೋಟ: ಅಪ್ಪ-ಮಗ ಸಾವು
ಪುದುಚೇರಿಯಲ್ಲಿ ಶುಕ್ರವಾರ ತಮ್ಮ ದ್ವಿಚಕ್ರ ವಾಹನದಲ್ಲಿ ಪಟಾಕಿ ಖರೀದಿಸಿ, ಕೊಂಡೊಯ್ಯುತ್ತಿದ್ದ ಅಪ್ಪ ಮತ್ತು 7 ವರ್ಷದ ಮಗ ಪಟಾಕಿ ಸ್ಫೋಟದಿಂದ ಸಾವಿಗೀಡಾಗಿದ್ದಾರೆ. ತಾವು ಹೊತ್ತೂಯ್ಯುತ್ತಿದ್ದ ಪಟಾಕಿಯು ಏಕಾಏಕಿ ಸ್ಫೋಟಗೊಂಡಿದ್ದೇ ಈ ದುರಂತಕ್ಕೆ ಕಾರಣ. ಕಳೈನೇಷನ್‌ ಮತ್ತು ಅವರ ಪುತ್ರ ಪ್ರದೀಶ್‌ ಮೃತರು. ಅವರು ಸಂಚರಿಸುತ್ತಿದ್ದ ಸ್ಕೂಟರ್‌ ಸ್ಫೋಟಗೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next