ನವದೆಹಲಿ: ದೇಶದ ರಾಜಧಾನಿಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದ್ದು ಸೊಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ದಾಖಲೆಯ 3,137 ಜನರಿಗೆ ಸೋಂಕು ತಗುಲಿದ್ದು, ಹಾಗಾಗಿ ಒಟ್ಟಾರೆ ಸೋಂಕಿತರ ಪ್ರಮಾಣ 53,116 ಎಂದು ತಿಳಿದುಬಂದಿದೆ.
ಕಳೆದ 5 ದಿನದಲ್ಲಿ 10 ಸಾವಿರ ಜನರಿಗೆ ವೈರಾಣು ತಗುಲಿದ್ದು ಸಹಜವಾಗಿ ಆತಂಕ್ಕೀಡುಮಾಡಿದೆ. ದೆಹಲಿಯಲ್ಲಿ ಮೊದಲ ಕೋವಿಡ್ 19 ಪ್ರಕರಣ ಮಾರ್ಚ್ 2 ರಂದು ಕಂಡುಬಂದಿತ್ತು. ಇದಾದ 40 ದಿನಗಳಲ್ಲಿ 1,000 ಜನರಲ್ಲಿ ವೈರಾಣು ಕಾಣಿಸಿಕೊಂಡಿದ್ದು ಮುಂದಿನ 37 ದಿನದಲ್ಲಿ 10,000ದ ಗಡಿ ದಾಟಿತ್ತು. ಒಟ್ಟಾರೆಯಾಗಿ 50,000 ಜನರಿಗೆ 110 ದಿನಗಳಲ್ಲಿ ಸೋಂಕು ಭಾಧಿಸಿದೆ.
ಕಳೆದ 24 ಗಂಟೆಗಳಲ್ಲಿ 66 ಜನರು ಈ ಮಾರಕ ವೈರಸ್ ಗೆ ಬಲಿಯಾಗಿದ್ದು, ಒಟ್ಟಾರೆ ಮೃತರ ಪ್ರಮಾಣ 2,000 ದ ಗಡಿ ದಾಟಿದೆ. ಪ್ರಸ್ತುತ ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ 12,208 ಹಾಸಿಗೆಗಳನ್ನು ನಿಗದಿಪಡಿಸಲಾಗಿದೆ. ಮುಂದಿನ ತಿಂಗಳ ಅಂತ್ಯದ ವೇಳೆಗೆ ಅಗತ್ಯವಿರುವ 1,50,000 ಹಾಸಿಗೆಗಳ ಬಲವನ್ನು ಹೆಚ್ಚಿಸಲು ಕ್ರೀಡಾಂಗಣಗಳು ಮತ್ತು ಸಭಾಂಗಣಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಕೆಲಸವನ್ನು ಸರ್ಕಾರ ನಡೆಸುತ್ತಿದೆ.
ದೆಹಲಿಯಲ್ಲಿ ವೈರಸ್ ಉತ್ತುಂಗಕ್ಕೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಲಕ್ಷಾಂತರ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.