ನವದೆಹಲಿ: ಕಾರಿನಡಿ ಸಿಲುಕಿಕೊಂಡ ಯುವತಿಯನ್ನು 12 ಕಿ.ಮೀ.ವರೆಗೆ ಎಳೆದೊಯ್ದು, ಆಕೆಯ ಸಾವಿಗೆ ಕಾರಣವಾದ ಘಟನೆ ಮಾಸುವ ಮುಂಚೆಯೇ ರಾಷ್ಟ್ರರಾಜಧಾನಿಯಲ್ಲಿ ಇಂಥ ಮತ್ತೂಂದು ಘಟನೆ ವರದಿಯಾಗಿದ್ದು, ಪಾನಮತ್ತ ಚಾಲಕನೊಬ್ಬ ಮಹಿಳಾ ಆಯೋಗದ ಮುಖ್ಯಸ್ಥೆಯನ್ನೇ ಕಾರಿನಲ್ಲಿ ಎಳೆದೊಯ್ದಿದ್ದಾನೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್, ಬುಧವಾರ ತಡರಾತ್ರಿ ಸುಮಾರು 2.45ರ ವೇಳೆಗೆ ಏಮ್ಸ್ ಆಸ್ಪತ್ರೆಯ 2ನೇ ಗೇಟಿನ ಬಳಿ ನಿಂತಿದ್ದರು. ಈ ವೇಳೆ ಅವರ ಮುಂದೆ ಬಂದು ನಿಂತ ಬಿಳಿ ಬಣ್ಣದ ಕಾರಿನ ಚಾಲಕ, ಪಾನ ಮತ್ತನಾಗಿದ್ದು, ಸ್ವಾತಿ ಅವರನ್ನು ಕಾರಿನ ಒಳಗೆ ಕೂರುವಂತೆ ಹೇಳಿದ್ದಾನೆ. ಅವರು ನಿರಾಕರಿಸಿದ ಬಳಿಕ ಮತ್ತೆ ಒತ್ತಾಯಿಸಿದ್ದಾನೆ.
ಈ ಹಿನ್ನೆಲೆ ಚಾಲಕನ ಉದ್ಧಟತನ ಪ್ರಶ್ನಿಸಲು ಸ್ವಾತಿ, ಕಾರಿನ ಕಿಟಕಿ ಬಳಿ ತೆರಳಿದಾಗ, ಅವರ ಕೈಯನ್ನು ಒಳ ಸೇರಿಸಿ, ಕಿಟಕಿ ಗಾಜು ಮುಚ್ಚಿದ ಚಾಲಕ, 10ರಿಂದ 15 ಮೀಟರ್‌ವರೆಗೆ ಸ್ವಾತಿ ಅವರನ್ನು ಎಳೆದೊಯ್ದಿದ್ದಾನೆ. ಪ್ರಕರಣ ಸಂಬಂಧಿಸಿದಂತೆ ಕೇಸು ದಾಖಲಾದಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.