Advertisement

ಡೆಲ್ಲಿಗೆ ಪಂಜಾಬ್‌ ಸವಾಲು

03:03 AM Apr 20, 2019 | mahesh |

ಹೊಸದಿಲ್ಲಿ: ಆತಿಥೇಯ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಎರಡನೇ ಮುಖಾಮುಖೀ ಕೋಟ್ಲಾದಲ್ಲಿ ನಡೆಯಲಿದೆ. ಶನಿವಾರದ ಎರಡನೇ ಪಂದ್ಯದಲ್ಲಿ ಇತ್ತಂಡಗಳು ಸೆಣಸಲಿವೆ. ಡೆಲ್ಲಿಗೆ ಇದು ತವರಿನ ಪಂದ್ಯ ಹಾಗೂ ಸೇಡಿನ ಪಂದ್ಯವೂ ಹೌದು. ಮೊಹಾಲಿಯಲ್ಲಿ ನಡೆದ ಮೊದಲ ಮುಖಾಮುಖೀಯಲ್ಲಿ ಡೆಲ್ಲಿ ಪಂಜಾಬ್‌ಗ ಶರಣಾಗಿತ್ತು. ಇತ್ತ ಪಂಜಾಬ್‌ ಎರಡನೇ ಪಂದ್ಯದಲ್ಲೂ ಜಾದು ಮಾಡಿ ಪಂದ್ಯ ಕಸಿದುಕೊಳ್ಳುವ ನಿರೀಕ್ಷೆಯಲ್ಲಿದೆ.

Advertisement

23 ಬಾರಿ ಮುಖಾಮುಖಿ
23 ಬಾರಿ ಪಂಜಾಬ್‌ ಮತ್ತು ಡೆಲ್ಲಿ ಮುಖಾಮುಖೀಯಾಗಿದೆ. 14 ಪಂದ್ಯ ಪಂಜಾಬ್‌, 9 ಪಂದ್ಯ ಡೆಲ್ಲಿ ಗೆದ್ದಿವೆ. ಈ ಲೆಕ್ಕಾಚಾರದಲ್ಲಿ ಪಂಜಾಬ್‌ಗ ಗೆಲುವಿನ ಸಾಧ್ಯತೆ ಹೆಚ್ಚಿದೆ.  ಮೊದಲ ಪಂದ್ಯದಲ್ಲಿ ಡೆಲ್ಲಿಗೆ ಅಂತಿಮ 21 ಎಸೆತಗಳಲ್ಲಿ ಕೇವಲ 23 ರನ್‌ ಬೇಕಿತ್ತು. 7 ವಿಕೆಟ್‌ ಕೈಯಲ್ಲಿತ್ತು. ಆದರೆ ಸ್ಯಾಮ್‌ ಕರನ್‌ 4 ವಿಕೆಟ್‌ ಕಿತ್ತು ಪಂದ್ಯದ ಗತಿ ಯನ್ನೇ ಬದಲಾಯಿಸಿ ಡೆಲ್ಲಿ ಯಿಂದ ಗೆಲುವನ್ನು ಕಸಿದು ಕೊಂಡಿದ್ದರು. ಈ ಸೇಡು ತೀರಿಸಲು ಡೆಲ್ಲಿ ಕಾದು ಕುಳಿತಿದೆ.

ಡೆಲ್ಲಿಗೆ ಸ್ಥಿರ ಆಟಗಾರರ ಸಮಸ್ಯೆ
ಡೆಲ್ಲಿ ತಂಡದಲ್ಲಿ ಹೆಚ್ಚಾಗಿ ಭರವಸೆ ಇಡುವಂತಹ ಆಟಗಾರರಿಲ್ಲ. ಯುವ ಆಟಗಾರರೇ ಹೆಚ್ಚಿರುವ ತಂಡದಲ್ಲಿ ಯಾರೊಬ್ಬರೂ ಸ್ಥಿರವಾಗಿ ಆಟವಾಡುತ್ತಿಲ್ಲ. ಒಂದು ಪಂದ್ಯದಲ್ಲಿ ಮಿಂಚಿದರೆ ಮತ್ತೂಂದು ಪಂದ್ಯದಲ್ಲಿ ಎಡವುತ್ತಿರುವುದು ಡೆಲ್ಲಿಗೆ ಬಹುದೊಡ್ಡ ತಲೆನೋವಾಗಿದೆ.  ಬ್ಯಾಟಿಂಗ್‌ನಲ್ಲಿ ರಿಷಬ್‌ ಪಂತ್‌, ಶಿಖರ್‌ ಧವನ್‌, ಕಾಲಿನ್‌ ಮನ್ರೊ ಔಟಾದ ಅನಂತರ ತಂಡವನ್ನು ಮೇಲಕ್ಕೆತ್ತುವ ಭರವಸೆಯ ಆಟಗಾರರು ಯಾರೂ ಇಲ್ಲ. ಇದಕ್ಕೆ ಗುರುವಾರ ನಡೆದ ಮುಂಬೈ ವಿರುದ್ಧದ ಪಂದ್ಯವೇ ಸಾಕ್ಷಿ.

ಪಂಜಾಬ್‌ಗ ಬ್ಯಾಟಿಂಗ್‌ ಬಲ
ಪ್ರತೀ ಪಂದ್ಯದಲ್ಲೂ ಮಿಂಚುತ್ತಿರುವ ಕೆ. ಎಲ್‌. ರಾಹುಲ್‌ ಮತ್ತು ಕ್ರಿಸ್‌ ಗೇಲ್‌ ಪಂಜಾಬ್‌ನ ಅಪಾಯಕಾರಿ ಆಟಗಾರರು. ಇವರನ್ನು ಹೊರತು ಪಡಿಸಿದರೆ ಮಾಯಾಂಕ್‌ ಅಗರ್ವಾಲ್‌, ಮತ್ತು ಡೇವಿಡ್‌ ಮಿಲ್ಲರ್‌ ಕೂಡ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿರುವುದೂ ತಂಡಕ್ಕೆ ಹೆಚ್ಚಿನ ಬಲ. ಪಂಜಾಬ್‌ನ ಬೌಲಿಂಗ್‌ ವಿಭಾಗ ಇನ್ನಷ್ಟು ಸುಧಾರಿಸಿಕೊಳ್ಳಬೇಕಾಗಿದೆ. ಅಶ್ವಿ‌ನ್‌ದ್ವಯರು ಹೊರತುಪಡಿಸಿದರೆ ಉಳಿದವರಿಂದ ಘಾತಕ ಸ್ಪೆಲ್‌ ಕಂಡುಬಂದಿಲ್ಲ. ಹೀಗಾಗಿ ಗೇಲ್‌, ರಾಹುಲ್‌ ಬ್ಯಾಟಿಂಗ್‌ ಮೇಲೆ ಪಂಜಾಬ್‌ ಹೆಚ್ಚು ಭರವಸೆ ಇಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next