ನವದೆಹಲಿ: ಉತ್ತರಪ್ರದೇಶ ಕೇಡರ್ ನ ಐಪಿಎಸ್ ಅಧಿಕಾರಿ ಎಂದು ಪೋಸು ನೀಡಿ, ದೆಹಲಿಯಲ್ಲಿ ಮಹಿಳೆಯೊಬ್ಬರನ್ನು ವಂಚಿಸಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಈ ವ್ಯಕ್ತಿಯನ್ನು ಮಧ್ಯಪ್ರದೇಶ ಗ್ವಾಲಿಯರ್ ನಿವಾಸಿ ವಿಕಾಸ್ ಗೌತಮ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಭಾರತ ಪ್ರವಾಸಕ್ಕೆ ಕಿವೀಸ್ ತಂಡ ಪ್ರಕಟ: ಹೊರಗುಳಿದ ವಿಲಿಯಮ್ಸನ್
ತಾನು ಕಾನ್ಪುರ್ ಐಐಟಿ ಪದವೀಧರ ಎಂದು ಹೇಳಿಕೊಂಡಿದ್ದ ವಿಕಾಸ್ ಐಪಿಎಸ್ ಅಧಿಕಾರಿ ಎಂದು ನಂಬಿಸಿದ್ದ. ದೆಹಲಿಯ ಮಹಿಳಾ ವೈದ್ಯರೊಬ್ಬರು ದಾಖಲಿಸಿದ ದೂರಿನ ಅನ್ವಯ ದೆಹಲಿ ಸೈಬರ್ ಸೆಲ್ ಅಧಿಕಾರಿಗಳು ವಿಕಾಸ್ ನನ್ನು ಬಂಧಿಸಿದ್ದಾರೆ.
ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಪೋಸ್ ಕೊಟ್ಟಿದ್ದ ವಿಕಾಸ್ ಮಹಿಳಾ ವೈದ್ಯೆಯಿಂದ 25,000 ಸಾವಿರ ರೂಪಾಯಿ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಹಿಳಾ ವೈದ್ಯೆ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಪ್ರವೃತ್ತರಾಗಿದ್ದ ದೆಹಲಿ ಪೊಲೀಸರು ವಿಕಾಸ್ ನನ್ನು ಬಂಧಿಸಿದ್ದರು.
ಈತ ಐಪಿಎಸ್ ಅಧಿಕಾರಿ ಎಂಬಂತೆ ಬಿಂಬಿಸಿಕೊಳ್ಳಲು ನಕಲಿ ಫೇಸ್ ಬುಕ್ ಮತ್ತು ಇನ್ಸ್ ಟಾಗ್ರಾಮ್ ಖಾತೆ ತೆರೆದಿರುವುದು ತನಿಖೆಯಿಂದ ತಿಳಿದು ಬಂದಿದೆ. 8ನೇ ತರಗತಿ ಉತ್ತೀರ್ಣರಾದ ನಂತರ ವಿಕಾಸ್ ದೆಹಲಿಗೆ ವಲಸೆ ಬಂದು ಮುಖರ್ಜಿ ನಗರದ ಹೋಟೆಲ್ ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ, ಇಲ್ಲಿಗೆ ಬರುತ್ತಿದ್ದ ಅಧಿಕಾರಿಗಳನ್ನು ಗಮನಿಸಿದ ನಂತರ ವಿಕಾಸ್ ತಾನು ಐಪಿಎಸ್ ಅಧಿಕಾರಿಯಂತೆ ಇರಬೇಕೆಂಬ ಪ್ಲ್ಯಾನ್ ಹಾಕಿಕೊಂಡು, ಅದರಂತೆ ಫೋಸು ಕೊಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.