Advertisement

ರೋಹಿತ್‌ ಶೇಖರ್‌ ಸಾವು ಪ್ರಕರಣ: ಪತ್ನಿ ಅಪೂರ್ವ ಬಂಧನ

09:07 AM Apr 25, 2019 | Hari Prasad |

ನವದೆಹಲಿ: ಉತ್ತರಪ್ರದೇಶ ಮತ್ತು ಉತ್ತರಾಖಂಡ್‌ ಮಾಜೀ ಮುಖ್ಯಮಂತ್ರಿ ದಿವಂಗತ ಎನ್‌.ಡಿ. ತಿವಾರಿಯವರ ಪುತ್ರ ರೋಹಿತ್‌ ಶೇಖರ್‌ ತಿವಾರಿ ಅವರ ಶಂಕಾಸ್ಪದ ಸಾವಿನ ಪ್ರಕರಣವನ್ನು ಬೆಧಿಸುವಲ್ಲಿ ಕ್ರೈಂ ಬ್ರ್ಯಾಂಚ್‌ ಪೊಲೀಸರು ಯಶಸ್ವಿಯಾಗಿದ್ದಾರೆ. ಪತಿಯ ಸಾವಿನಲ್ಲಿ ತಿವಾರಿ ಅವರ ವಕೀಲೆ ಪತ್ನಿ ಅಪೂರ್ವ ಅವರ ಕೈವಾಡ ಇರುವ ಶಂಕೆಯ ಆಧಾರದಲ್ಲಿ ಪೊಲೀಸರು ಇಂದು ಆಕೆಯನ್ನು ಬಂಧಿಸಿದ್ದಾರೆ.

Advertisement

ಎಪ್ರಿಲ್‌ 16ರಂದು ರೋಹಿತ್‌ ಶೇಖರ್‌ ಅವರನ್ನು ರಾಷ್ಟ್ರ ರಾಜಧಾನಿಯ ಸಾಕೇತ್‌ ನಲ್ಲಿರುವ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುಂಚೆಯೇ ಸಾವನ್ನಪ್ಪಿದ್ದರು. ಆ ಬಳಿಕ ಏಮ್ಸ್‌ ಆಸ್ಪತ್ರೆಯ ಐದು ಹಿರಿಯ ವೈದ್ಯರನ್ನು ಒಳಗೊಂಡಿದ್ದ ವೈದ್ಯಕೀಯ ಮಂಡಳಿಯು ವಿಸ್ತೃತ ಮರಣೊತ್ತರ ಪರೀಕ್ಷೆಯನ್ನು ನಡೆಸಿ ಅಟಾಪ್ಸಿ ವರದಿಯನ್ನು ಸಲ್ಲಿಸಿತ್ತು.

ಉಸಿರುಕಟ್ಟಿದ ಸ್ಥಿತಿಯಲ್ಲಿ ದೇಹಕ್ಕೆ ಆಮ್ಲಜನಕ ಪೂರೈಕೆ ಕೊರತೆಯಿಂದ ರೋಹಿತ್‌ ಶೇಖರ್‌ ಅವರ ಸಾವಾಗಿದೆ ಎಂದು ಹಿರಿಯ ವೈದ್ಯರ ತಂಡ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು. ಮತ್ತು ರೋಹಿತ್‌ ಅವರನ್ನು ತಲೆದಿಂಬಿನ ಮೂಲಕ ಉಸಿರುಕಟ್ಟಿಸಿರುವ ಸಾಧ್ಯತೆಗಳಿವೆ ಎಂದೂ ವೈದ್ಯರು ಅಭಿಪ್ರಾಯಪಟ್ಟಿದ್ದರು.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈ ಬ್ರ್ಯಾಂಚ್‌ ಅಧಿಕಾರಿಗಳು ರೋಹಿತ್‌ ಸಾವಿಗೆ ಸಂಬಂಧಿಸಿದಂತೆ ಅವರ ಪತ್ನಿ ಹಾಗೂ ಇಬ್ಬರು ಮನೆ ಕೆಲಸದವರನ್ನು ವಿಚಾರಣೆಗೊಳಪಡಿಸಿದ್ದರು. ರೋಹಿತ್‌ ಪತ್ನಿ ಅಪೂರ್ವ ಅವರನ್ನು ಸತತ ಮೂರು ದಿನಗಳ ಕಾಲ ನಿರಂತರ ವಿಚಾರಣೆಗೆ ಒಳಪಡಿಸಲಾಗಿತ್ತು. ಇನ್ನು ರೋಹಿತ್‌ ಶೇಖರ್‌ ಅವರ ಮನೆಯ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಹ ತನಿಖಾಧಿಕಾರಿಗಳು ಪರಿಶೀಲನೆಗೊಳಪಡಿಸಿದ್ದರು.

ಇನ್ನು ರೋಹಿತ್‌ ಅವರು ಸಾವನ್ನಪ್ಪಿದ ನಾಲ್ಕು ದಿನಗಳ ಬಳಿಕ ರೋಹಿತ್‌ ಅವರ ತಾಯಿ ಉಜ್ವಲಾ ತಿವಾರಿ ಅವರು ತನ್ನ ಮಗ ಹಾಗೂ ಸೊಸೆಯ ನಡುವೆ ಸಂಬಂಧ ಉತ್ತಮವಾಗಿರಲಿಲ್ಲ ಎಂದು ಮಾಧ್ಯಮದ ಮೂಲಕ ಹೇಳಿಕೊಂಡಿದ್ದರು. ಅವರಿಬ್ಬರದ್ದೂ ಪ್ರೇಮ ವಿವಾಹವಾಗಿದ್ದರೂ ಮೊದಲಿನಿಂದಲೂ ಅವರಿಬ್ಬರ ನಡುವೆ ಸಂಬಂಧ ಚೆನ್ನಾಗಿರಲಿಲ್ಲ ಎಂದು ಆಕೆಯ ಹೇಳಿಕೆಯಾಗಿತ್ತು. ತನ್ನಿಬ್ಬರೂ ಮಕ್ಕಳ ಆಸ್ತಿಯನ್ನು ಕಬಳಿಸಲು ಅಪೂರ್ವ ಅವರ ಕುಟುಂಬ ಸಂಚು ರೂಪಿಸಿತ್ತು ಎಂದೂ ಉಜ್ವಲಾ ಅವರು ಅರೋಪ ಮಾಡಿದ್ದರು. ಅಪೂರ್ವ ಅವರು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಪ್ರಾಕ್ಟೀಸ್‌ ಮಾಡುತ್ತಿದ್ದಾರೆ.

Advertisement

ರೋಹಿತ್‌ ಅವರು ಎಪ್ರಿಲ್‌ 12ರಂದು ಉತ್ತರಾಖಂಡ್‌ ಗೆ ಹೋಗಿದ್ದರು ಮತ್ತು 15ನೇ ತಾರೀಖೀನಂದು ವಾಪಾಸಾಗಿದ್ದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರು ತೂರಾಡುತ್ತಿರುವ ಸ್ಥಿತಿಯಲ್ಲಿ ಗೋಡೆಯನ್ನು ಆಧರಿಸಿ ನಡೆಯುತ್ತಿರುವುದು ದಾಖಲಾಗಿದೆ. ಇನ್ನು ರೋಹಿತ್‌ ಅವರು ಉಸಿರುಕಟ್ಟಿಕೊಂಡ ಸ್ಥಿತಿಯಲ್ಲಿದ್ದಾಗ ಮನೆಯೊಳಗೆ ಯಾರೂ ಹೋಗಿರುವುದು ಅಥವಾ ಹೊರ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿಲ್ಲ ಎಂಬೆಲ್ಲಾ ವಿಚಾರಗಳನ್ನು ಗಮನಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆಗೆ ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next