ಹೊಸದಿಲ್ಲಿ : ಪಾಕಿಸ್ಥಾನದ ಕುಖ್ಯಾತ ಬೇಹು ಸಂಸ್ಥೆ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ದಿಲ್ಲಿ ಪೊಲೀಸರ ವಿಶೇಷ ವಿಭಾಗ ವಾಯುಪಡೆ ಅಧಿಕಾರಿಯೊಬ್ಬರನ್ನು ಬಂಧಿಸಿದೆ.
ಉನ್ನತ ರಹಸ್ಯಗಳ ಮಾಹಿತಿ ಮತ್ತು ದಾಖಲೆಪತ್ರಗಳನ್ನು ಪಾಕಿಸ್ಥಾನಕ್ಕೆ ಸೋರಿಕೆ ಮಾಡಿದ ಆರೋಪದ ಮೇಲೆ ಗ್ರೂಪ್ ಕ್ಯಾಪ್ಟನ್ ಅರುಣ್ ಮಾರ್ವಾ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದರು. ಈ ರಹಸ್ಯ ದಾಖಲೆಪತ್ರಗಳು ಭಾರತೀಯ ವಾಯು ಪಡೆಯ ಕಾರ್ಯಾಚರಣೆಗಳ ವರ್ಗೀಕೃತ ವಿವರಗಳನ್ನು ಹೊಂದಿವೆ.
ಬಂಧಿತ ವಾಯು ಪಡೆ ಅಧಿಕಾರಿ ಅರುಣ್ ಮಾರ್ವಾ ವಿರುದ್ಧ ಪೊಲೀಸರು ಅಧಿಕೃತ ರಹಸ್ಯಗಳ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮಾರ್ಮಾ ಅವರ ವಿರುದ್ಧದ ಆರೋಪಗಳು ಸಾಬೀತಾದಲ್ಲಿ ಅವರಿಗೆ ಏಳು ವರ್ಷ ಜೈಲಾಗಲಿದೆ.
ವಾಟ್ಸಾಪ್‌ನಲ್ಲಿ ಮಹಿಳೆ ಎಂದು ತನ್ನನ್ನು ಬಿಂಬಿಸಿಕೊಂಡಿದ್ದ ಪಾಕ್ ಏಜಂಟ್ ಜತೆಗೆ 51ರ ಹರೆಯದ ಮಾರ್ವಾ ಭಾರತೀಯ ವಾಯು ಪಡೆಯ ಉನ್ನತ ರಹಸ್ಯ ದಾಖಲೆಗಳನ್ನು ಹಂಚಿಕೊಂಡಿದ್ದರು.
ಎರಡು ತಿಂಗಳ ಹಿಂದಷ್ಟೇ ಈ ಐಎಸ್‌ಐ ಏಜಂಟ್ ಮಾರ್ವಾ ಅವರನ್ನು ಫೇಸ್ ಬುಕ್‌ನಲ್ಲಿ ದೋಸ್ತಿ ಮಾಡಿಕೊಂಡಿದ್ದರು. ಅನಂತರ ಇವರು ವಾಟ್ಸಾಪ್‌ನಲ್ಲಿ ದಿನನಿತ್ಯ ಎಂಬಂತೆ ಚ್ಯಾಟ್ ಮಾಡಿಕೊಂಡಿದ್ದರು. ಕೆಲವೊಮ್ಮೆ ಅತ್ಯಂತ ಆತ್ಮೀಯತೆಯ ಸಂದೇಶಗಳನ್ನು ವಿನಿಮಯಿಸಿಕೊಳ್ಳುತ್ತಿದ್ದರು. ಅದೇ ಸಂದರ್ಭದಲ್ಲಿ ಮಾರ್ವಾ ಅವರು ಐಎಸ್‌ಐ ಏಜಂಟ್ ಜತೆಗೆ ಭಾರತೀಯ ವಾಯು ಪಡೆಯ ಸೈಬರ್ ಸಮರ ಮತ್ತು ವಿಶೇಷ ಕಾರ್ಯಾಚರಣೆಯ ವರ್ಗೀಕೃತ ವಿವರಗಳನ್ನು ಹಂಚಿಕೊಂಡರು.
ವಾಯು ಪಡೆ ಪ್ರಧಾನ ಕಾರ್ಯಾಲಯದೊಳಗೆ ನಿಷಿದ್ಧವಾಗಿದ್ದ ಸೆಲ್ ಫೋನ್ ಜತೆಗೆ ಮಾರ್ವಾ ಪ್ರವೇಶಿಸಿದಾಗ ಅವರನ್ನು ಬಂಧಿಸಲಾಯಿತು ಎಂದು ವರದಿಗಳು ತಿಳಿಸಿವೆ.