Advertisement

ಮುಂಬೈ ಇಂಡಿಯನ್ಸ್‌ ಗೆಲುವು ಕಸಿದ ಲಲಿತ್‌-ಅಕ್ಷರ್‌

11:44 PM Mar 27, 2022 | Team Udayavani |

ಮುಂಬಯಿ: ಲಲಿತ್‌ ಯಾದವ್‌ ಮತ್ತು ಅಕ್ಷರ್‌ ಪಟೇಲ್‌ ಜೋಡಿಯ ಅಸಾಮಾನ್ಯ ಬ್ಯಾಟಿಂಗ್‌ ಪರಾಕ್ರಮದಿಂದ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ ಬಂದ ಡೆಲ್ಲಿ ಕ್ಯಾಪಿಟಲ್ಸ್‌ 4 ವಿಕೆಟ್‌ಗಳ ರೋಚಕ ಜಯ ಗಳಿಸಿದೆ.

Advertisement

ರವಿವಾರದ ಮೊದಲ ಐಪಿಎಲ್‌ ಮುಖಾಮುಖಿಯಲ್ಲಿಆತಿಥೇಯ ಮುಂಬೈ 5 ವಿಕೆಟಿಗೆ 177 ರನ್‌ ಗಳಿಸಿ ಸವಾಲೊಡ್ಡಿತು. ಇದನ್ನು ಬೆನ್ನಟ್ಟುವ ಹಾದಿಯಲ್ಲಿ ಡೆಲ್ಲಿ ತೀವ್ರ ಕುಸಿತಕ್ಕೆ ಸಿಲುಕಿತು. 10 ಓವರ್‌ ಒಳಗೆ 72 ರನ್ನಿಗೆ 5 ವಿಕೆಟ್‌ ಕಳೆದುಕೊಂಡಾಗ ಡೆಲ್ಲಿಯ ಸೋಲು ಖಾತ್ರಿಯಾಗಿತ್ತು. 104ಕ್ಕೆ 6 ವಿಕೆಟ್‌ ಬಿತ್ತು. ಅಂತಿಮವಾಗಿ 18.2 ಓವರ್‌ಗಳಲ್ಲಿ 6 ವಿಕೆಟಿಗೆ 179 ರನ್‌ ಬಾರಿಸಿ ಮುಂಬೈ ಮೇಲೆ ಸವಾರಿ ಮಾಡಿಯೇ ಬಿಟ್ಟಿತು!

ಪಂದ್ಯಕ್ಕೆ ತಿರುವು ಒದಗಿಸಿದವರೆಂದರೆ, 7ನೇ ವಿಕೆಟಿಗೆ ಜತೆಗೂಡಿದ ಲಲಿತ್‌ ಯಾದವ್‌ ಮತ್ತು ಅಕ್ಷರ್‌ ಪಟೇಲ್‌. ಇವರು ಕೇವಲ 30 ಎಸೆತಗಳಿಂದ 75 ರನ್‌ ಜತೆಯಾಟ ನಡೆಸಿ ಮುಂಬೈಯ ಗೆಲುವಿನ ಕನಸನ್ನು ಛಿದ್ರಗೊಳಿಸಿದರು. ಯಾದವ್‌ 38 ಎಸೆತಗಳಿಂದ ಅಜೇಯ 48 ರನ್‌ (4 ಫೋರ್‌, 2 ಸಿಕ್ಸರ್‌), ಪಟೇಲ್‌ 17 ಎಸೆತಗಳಿಂದ ಅಜೇಯ 38 ರನ್‌ (2 ಬೌಂಡರಿ, 3 ಸಿಕ್ಸರ್‌) ಬಾರಿಸಿ ಡೆಲ್ಲಿಯ ಗೆಲುವಿನ ರೂವಾರಿಗಳೆನಿಸಿದರು.

ಆರಂಭಿಕರಾದ ಪೃಥ್ವಿ ಶಾ (28)-ಟಿಮ್‌ ಸೀಫ‌ರ್ಟ್‌ (21) ಬಿರುಸಿನ ಆರಂಭ ಒದಗಿಸಿದ್ದರು. ಬಳಿಕ ಮುರುಗನ್‌ ಅಶ್ವಿ‌ನ್‌ ಮತ್ತು ಬಾಸಿಲ್‌ ಥಂಪಿ ಘಾತಕ ಸ್ಪೆಲ್‌ ನಡೆಸಿ ಮುಂಬೈಗೆ ಮೇಲುಗೈ ಒದಗಿಸಿದರು. ಕೊನೆಯಲ್ಲಿ ರೋಹಿತ್‌ ಪಡೆಯ ಬೌಲಿಂಗ್‌ ಮ್ಯಾಜಿಕ್‌ ನಡೆಯಲೇ ಇಲ್ಲ.

ಮಿಂಚಿದ ಇಶಾನ್‌ ಕಿಶನ್‌
ಮೆಗಾ ಹರಾಜಿನಲ್ಲಿ ಸರ್ವಾಧಿಕ 15.25 ಕೋಟಿ ರೂ. ಮೊತ್ತಕ್ಕೆ ಖರೀದಿಯಾದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಮುಂಬೈ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಆರಂಭಿಕನಾಗಿ ಬಂದು ಕೊನೆಯ ತನಕವೂ ಬ್ಯಾಟಿಂಗ್‌ ವಿಸ್ತರಿಸಿದ ಅವರು ಕೇವಲ 48 ಎಸೆತಗಳಿಂದ 81 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಈ ಬಿರುಸಿನ ಬ್ಯಾಟಿಂಗ್‌ ವೇಳೆ 11 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿದರು.

Advertisement

ನಾಯಕ ರೋಹಿತ್‌ ಶರ್ಮ ಮತ್ತು ಇಶಾನ್‌ ಕಿಶನ್‌ ಸೇರಿಕೊಂಡು ಮುಂಬೈಗೆ ಭರ್ಜರಿ ಆರಂಭ ಒದಗಿಸಿದರು. 8.2 ಓವರ್‌ಗಳಿಂದ 67 ರನ್‌ ಹರಿದು ಬಂತು. ಇದರಲ್ಲಿ ರೋಹಿತ್‌ ಪಾಲು 32 ಎಸೆತಗಳಿಂದ 41 ರನ್‌. 4 ಫೋರ್‌, 2 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು.

ಇಶಾನ್‌ ಕಿಶನ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದರಿಂದ ಮುಂಬೈ ಮೊತ್ತ ಬೆಳೆಯುತ್ತ ಹೋಯಿತು. ರೋಹಿತ್‌ ನಿರ್ಗಮನದ ಬಳಿಕ ಅವರಿಗೆ ಇನ್ನೊಂದು ತುದಿಯಿಂದ ಹೆಚ್ಚಿನ ಬೆಂಬಲ ಲಭಿಸಲಿಲ್ಲ. ಅನ್ಮೋಲ್‌ಪ್ರೀತ್‌ ಸಿಂಗ್‌ ಎಂಟೇ ರನ್ನಿಗೆ ಔಟಾದರು. ತಿಲಕ್‌ ವರ್ಮ 22 ರನ್‌ ಮಾಡಿದರು.

ಮುಂಬೈಯ ಮಧ್ಯಮ ಕ್ರಮಾಂಕದ ಮೇಲೆ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಮತ್ತು ಎಡಗೈ ಮಧ್ಯಮ ವೇಗಿ ಖಲೀಲ್‌ ಅಹ್ಮದ್‌ ಘಾತಕವಾಗಿ ಎರಗಿದರು. ಕುಲದೀಪ್‌ ಅತ್ಯಂತ ಬಿಗಿಯಾದ ದಾಳಿ ಸಂಘಟಿಸಿ 18 ರನ್‌ ವೆಚ್ಚದಲ್ಲಿ 3 ವಿಕೆಟ್‌ ಕಿತ್ತರು. ಖಲೀಲ್‌ ಸಾಧನೆ 27ಕ್ಕೆ 2 ವಿಕೆಟ್‌.

ರೋಹಿತ್‌ ಶರ್ಮಗೆ
12 ಲಕ್ಷ ರೂ. ದಂಡ
ಮುಂಬಯಿ, ಮಾ. 27: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ದಾಳಿ ನಡೆಸಿದ ಕಾರಣಕ್ಕೆ ಮುಂಬೈ ತಂಡದ ನಾಯಕ ರೋಹಿತ್‌ ಶರ್ಮ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಪೊವೆಲ್‌ ಬಿ ಕುಲದೀಪ್‌ 41
ಇಶಾನ್‌ ಕಿಶನ್‌ ಔಟಾಗದೆ 81
ಅನ್ಮೋಲ್‌ಪ್ರೀತ್‌ ಸಿಂಗ್‌ ಸಿ ಲಲಿತ್‌ ಬಿ ಕುಲದೀಪ್‌ 8
ತಿಲಕ್‌ ವರ್ಮ ಸಿ ಶಾ ಬಿ ಖಲೀಲ್‌ 22
ಕೈರನ್‌ ಪೊಲಾರ್ಡ್‌ ಸಿ ಸೀಫ‌ರ್ಟ್‌ ಬಿ ಕುಲದೀಪ್‌ 3
ಟಿಮ್‌ ಡೇವಿಡ್‌ ಸಿ ಮನ್‌ದೀಪ್‌ ಬಿ ಖಲೀಲ್‌ 12
ಡೇನಿಯಲ್‌ ಸ್ಯಾಮ್ಸ್‌ ಔಟಾಗದೆ 7
ಇತರ 3
ಒಟ್ಟು (5 ವಿಕೆಟಿಗೆ) 177
ವಿಕೆಟ್‌ ಪತನ: 1-67, 2-83, 3-117, 4-122, 5-159.
ಬೌಲಿಂಗ್‌:
ಶಾರ್ದೂಲ್ ಠಾಕೂರ್ 4-0-47-0
ಖಲೀಲ್‌ ಅಹ್ಮದ್‌ 4-0-27-2
ಅಕ್ಷರ್‌ ಪಟೇಲ್‌ 4-0-40-0
ಕಮಲೇಶ್‌ ನಾಗರಕೋಟಿ 2-0-29-0
ಕುಲದೀಪ್‌ ಯಾದವ್‌ 4-0-18-3
ಲಲಿತ್‌ ಯಾದವ್‌ 2-0-15-0

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಇಶಾನ್‌ ಬಿ ಥಂಪಿ 38
ಟಿಮ್‌ ಸೀಫ‌ರ್ಟ್‌ ಬಿ ಎಂ. ಅಶ್ವಿ‌ನ್‌ 21
ಮನ್‌ದೀಪ್‌ ಸಿಂಗ್‌ ಸಿ ತಿಲಕ್‌ ಬಿ ಎಂ. ಅಶ್ವಿ‌ನ್‌ 0
ರಿಷಭ್‌ ಪಂತ್‌ ಸಿ ಡೇವಿಡ್‌ ಬಿ ಮಿಲ್ಸ್‌ 1
ಲಲಿತ್‌ ಯಾದವ್‌ ಔಟಾಗದೆ 48
ಪೊವೆಲ್‌ ಸಿ ಸ್ಯಾಮ್ಸ್‌ ಬಿ ಥಂಪಿ 0
ಶಾರ್ದೂಲ್ ಠಾಕೂರ್ ಸಿ ರೋಹಿತ್‌ ಬಿ ಥಂಪಿ 22
ಅಕ್ಷರ್‌ ಪಟೇಲ್‌ ಔಟಾಗದೆ 38
ಇತರ 11
ಒಟ್ಟು (18.2 ಓವರ್‌ಗಳಲ್ಲಿ 6 ವಿಕೆಟಿಗೆ) 179
ವಿಕೆಟ್‌ ಪತನ: 1-30, 2-30, 3-32, 4-72, 5-72, 6-104.
ಬೌಲಿಂಗ್‌:
ಡೇನಿಯಲ್‌ ಸ್ಯಾಮ್ಸ್‌ 4-0-57-0
ಜಸ್‌ಪ್ರೀತ್‌ ಬುಮ್ರಾ 3.2-0-43-0
ಬಾಸಿಲ್‌ ಥಂಪಿ 4-0-35-3
ಮುರುಗನ್‌ ಅಶ್ವಿ‌ನ್‌ 4-0-14-2
ಟೈಮಲ್‌ ಮಿಲ್ಸ್‌ 3-0-26-1
ಪಂದ್ಯಶ್ರೇಷ್ಠ: ಕುಲದೀಪ್‌ ಯಾದವ್‌

 

Advertisement

Udayavani is now on Telegram. Click here to join our channel and stay updated with the latest news.

Next