ನವದೆಹಲಿ: ಉತ್ತರ ಭಾರತದಾದ್ಯಂತ ಭಾರೀ ಮಳೆಯಾಗುತ್ತಿರುವ ಕಾರಣ ಯಮುನಾ ನದಿಯಲ್ಲಿ ಪ್ರವಾಹ ಮಟ್ಟ ಕ್ಷಣ ಕ್ಷಣಕ್ಕೂ ಏರುತ್ತಿದೆ. ಮುಂಜಾಗರುಕತಾ ಕ್ರಮವಾಗಿ ಅಧಿಕಾರಿಗಳು ನದೀ ತಟದಲ್ಲಿರುವ ಜನರನ್ನು ಸ್ಥಳಾಂತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ದೆಹಲಿಯಲ್ಲಿ ಯಮುನಾ ನದಿಯ ಅಪಾಯ ಮಟ್ಟ 205.33 ಮೀಟರ್ ಗಳಾಗಿವೆ ಆದರೆ ಪ್ರಸ್ತುತ ನದಿಯಲ್ಲಿ ನೀರಿನ ಮಟ್ಟ 207 ಮೀಟರ್ ಮುಟ್ಟುವ ಸಾಧ್ಯತೆ ಇದೆ.
ಹತ್ನಿ ಕುಂಡ್ ಬ್ಯಾರೇಜ್ ನಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿರುವ ಕಾರಣ ನದಿಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಹಾಗಾಗಿ ಯುಮನೆಯ ತೀರದಲ್ಲಿ ವಾಸವಾಗಿರುವ ಹಾಗೂ ಈ ಭಾಗದಲ್ಲಿ ಕೆಲಸ ಮಾಡುತ್ತಿರುವವಿಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.
ಆದಿತ್ಯವಾರ ಮಧ್ಯಾಹ್ನ 3 ಗಂಟೆಗಳವರೆಗೆ ಹತ್ನಿ ಕುಂಡ್ ಬ್ಯಾರೇಜ್ ನಿಂದ 7,60,466ನಷ್ಟು ನೀರನ್ನು ಹೊರಬಿಡಲಾಗಿತ್ತು. ಇದು ದೆಹಲಿಯಲ್ಲಿ ಯಮುನಾ ನದಿ ಉಕ್ಕೇರಲು ಕಾರಣವಾಗಿದೆ.
ಈ ಹಿಂದೆ 1978ರಲ್ಲಿ ಯಮುನಾ ನದಿಯಲ್ಲಿ ಪ್ರವಾಹ ಸ್ಥಿತಿ ಕಾಣಿಸಿಕೊಂಡಿತ್ತು. ಮತ್ತು ಆಗ ನದಿ ನೀರಿನ ಮಟ್ಟ 207.49 ಮೀಟರ್ ಗಳಿಗೆ ಏರಿಕೆಯಾಗಿತ್ತು.