Advertisement

ದಿಲ್ಲಿ-ಲಕ್ನೋ ತೇಜಸ್ ಎಕ್ಸ್ ಪ್ರೆಸ್ ಗೆ ಚಾಲನೆ, ಏನಿದರ ವಿಶೇಷತೆ, ಮೆನು, ಟಿಕೆಟ್ ದರ ಎಷ್ಟು

11:13 AM Oct 05, 2019 | Nagendra Trasi |

ಲಕ್ನೋ: ದೆಹಲಿ ಟು ಲಕ್ನೋ ನಡುವೆ ಸಂಚರಿಸಲಿರುವ ದೇಶದ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ ಪ್ರೆಸ್ ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಐಆರ್ ಟಿಸಿಯ ನಿರ್ವಹಣೆಯ ಭಾರತದ ಪ್ರಥಮ ಖಾಸಗಿ ರೈಲು ತೇಜಸ್ ಶನಿವಾರದಿಂದ ಸಂಚರಿಸಲಿದೆ.

Advertisement

ಭಾರತೀಯ ರೈಲ್ವೆ ಇಲಾಖೆ ಆಶ್ರಯದಲ್ಲಿ ಸಂಚರಿಸಲಿರುವ ತೇಜಸ್ ಎಕ್ಸ್ ಪ್ರೆಸ್ ಖಾಸಗಿ ರೈಲಿನಲ್ಲಿ ವಿಮಾನ ಮಾದರಿಯ ಸೌಲಭ್ಯ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಸಂಪೂರ್ಣ ಹವಾನಿಯಂತ್ರಿತ ತೇಜಸ್ ಎಕ್ಸ್ ಪ್ರೆಸ್ ರೈಲು ದೆಹಲಿಯಿಂದ ಲಕ್ನೋಗೆ 6ಗಂಟೆ 15 ನಿಮಿಷಗಳಲ್ಲಿ ತಲುಪಲಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಭಾರತದ ಮೊದಲ ಖಾಸಗಿ ತೇಜಸ್ ಎಕ್ಸ್ ಪ್ರೆಸ್ ನಲ್ಲಿ ವಿಮಾನ ಮಾದರಿ ಸೌಲಭ್ಯ ಸಿಗುತ್ತೆ!

ದೆಹಲಿ-ಲಕ್ನೋ ತೇಜಸ್ ಎಕ್ಸ್ ಪ್ರೆಸ್ ಒಂದು ವೇಳೆ ವಿಳಂಬವಾದರೆ ಪ್ರಯಾಣಿಕರಿಗೆ ನಷ್ಟವನ್ನು ತುಂಬಿ ಕೊಡಲಿರುವ ದೇಶದ ಮೊದಲ ರೈಲು ಎಂಬ ಹೆಗ್ಗಳಿಕೆ ಇದರದ್ದಾಗಲಿದೆ. ಒಂದು ಗಂಟೆಗಿಂತ ಹೆಚ್ಚು ವಿಳಂಬವಾದರೆ ಪ್ರಯಾಣಿಕರಿಗೆ 100 ರೂಪಾಯಿ, ಎರಡು ಗಂಟೆಗಿಂತ ಹೆಚ್ಚು ವಿಳಂಬವಾದರೆ 250 ರೂಪಾಯಿ ಪರಿಹಾರದ ರೂಪದಲ್ಲಿ ನೀಡಲಿದೆ ಎಂದು ತಿಳಿಸಿದೆ.

ತೇಜಸ್ ಎಕ್ಸ್ ಪ್ರೆಸ್ ರೈಲಿನ ಸಮಯ:

Advertisement

ತೇಜಸ್ ಎಕ್ಸ್ ಪ್ರೆಸ್ ರೈಲು(ರೈಲು ನಂ.82501) ಲಕ್ನೋದಿಂದ ಬೆಳಗ್ಗೆ 6.10ಕ್ಕೆ ಹೊರಡಲಿದ್ದು, ದೆಹಲಿಗೆ 12.25ಕ್ಕೆ ತಲುಪಲಿದೆ. ಅದೇ ರೀತಿ ದೆಹಲಿಯಿಂದ (ರೈಲು ನಂ.82502) 4.30ಕ್ಕೆ ಹೊರಟು ರಾತ್ರಿ 10.35ಕ್ಕೆ ಲಕ್ನೋ ತಲುಪಲಿದೆ. ವಾರದಲ್ಲಿ ಮಂಗಳವಾರ ಹೊರತುಪಡಿಸಿ, ಉಳಿದ ಎಲ್ಲಾ ದಿನ ತೇಜಸ್ ಎಕ್ಸ್ ಪ್ರೆಸ್ ಸಂಚರಿಸಲಿದೆ. ಈ ರೈಲು ಕಾನ್ಪುರ್ ಸೆಂಟ್ರಲ್ ಮತ್ತು ಗಾಜಿಯಾಬಾದ್ ನಲ್ಲಿ ನಿಲುಗಡೆ ಇದೆ.

ತೇಜಸ್ ರೈಲಿನಲ್ಲಿ ಟಿಕೆಟ್ ದರ ಎಷ್ಟು?

ಲಕ್ನೋದಿಂದ ದೆಹಲಿಗೆ ಎಸಿ (Chair car-ಇದು ಬಕೆಟ್ ಆಕೃತಿಯ ಸೀಟ್) ಟಿಕೆಟ್  ಬೆಲೆ ಒಬ್ಬರಿಗೆ 1,125 ರೂಪಾಯಿ, ಎಕ್ಸಿಕ್ಯೂಟಿವ್ ಸೀಟ್ ಟಿಕೆಟ್ ಗೆ ಒಬ್ಬರಿಗೆ 2,310 ರೂಪಾಯಿ.

ದೆಹಲಿಯಿಂದ ಲಕ್ನೋಗೆ ಎಸಿ ಟಿಕೆಟ್ ಬೆಲೆ 1,280 ರೂಪಾಯಿ, ಎಕ್ಸಿಕ್ಯೂಟಿವ್ ಟಿಕೆಟ್ ಬೆಲೆ ಒಬ್ಬರಿಗೆ 2,450 ರೂಪಾಯಿ. ಪ್ರಯಾಣಿಕರು ಲಕ್ನೋದಿಂದ ಕಾನ್ಪುರ್ ಕ್ಕೆ ತೇಜಸ್ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುವುದಾದರೆ ಟಿಕೆಟ್ ಬೆಲೆ ಒಬ್ಬರಿಗೆ 320 ರೂಪಾಯಿ, ಎಕ್ಸಿಕ್ಯೂಟಿವ್ ಟಿಕೆಟ್ ಗೆ 630 ರೂಪಾಯಿ. ಲಕ್ನೋದಿಂದ ಗಾಜಿಯಾಬಾದ್ ಗೆ ಎಸಿ ಟಿಕೆಟ್ ಬೆಲೆ 1,125, ಎಕ್ಸಿಕ್ಯೂಟಿವ್ ಟಿಕೆಟ್ ಗೆ 2,310 ರೂಪಾಯಿ.

ತೇಜಸ್ ಎಕ್ಸ್ ಪ್ರೆಸ್ ಮೆನು:

ತೇಜಸ್ ಎಕ್ಸ್ ಪ್ರೆಸ್ ನಲ್ಲಿ ನ ಊಟಕ್ಕೆ (ಎಸಿ ಕ್ಲಾಸ್) 185 ರೂಪಾಯಿ, ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ 245 ರೂಪಾಯಿ (ಟಿಕೆಟ್ ದರದಲ್ಲಿಯೇ ಸೇರಿರುತ್ತದೆ). ದೆಹಲಿಯಿಂದ ಲಕ್ನೋ ಪ್ರಯಾಣದ ವೇಳೆ ಕೆಟರಿಂಗ್ ಬೆಲೆ 340 ರೂಪಾಯಿ(Chair car) ಮತ್ತು ಎಕ್ಸಿಕ್ಯೂಟಿವ್ ಗೆ 385 ರೂಪಾಯಿ ದರ ನಿಗದಿಪಡಿಸಿರುವುದಾಗಿ ವಿವರಿಸಿದೆ.

ತೇಜಸ್ ಎಕ್ಸ್ ಪ್ರೆಸ್ ರೈಲಿನ ಎಸಿ ಕ್ಲಾಸ್ ಪ್ರಯಾಣಿಕರಿಗೆ ಟೀ, ಕಾಫಿ(ಪ್ರಿ ಮಿಕ್ಸ್ ಕಿಟ್) ಕೊಡಲಿದ್ದು, ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರಿಗೆ ಪ್ರಿಮೀಯಮ್ ಕುಕ್ಕೀಸ್ ಕಿಟ್ ನೀಡಲಾಗುವುದು ಎಂದು ಐಆರ್ ಸಿಟಿಸಿ ತಿಳಿಸಿದೆ. ಅಷ್ಟೇ ಅಲ್ಲ ಎಸಿ ಪ್ರಯಾಣಿಕರಿಗೆ ಲಿಂಬು ಶರಬತ್, ಎಕ್ಸಿಕ್ಯೂಟಿವ್ ಪ್ರಯಾಣಿಕರಿಗೆ ಲಸ್ಸಿ ವಿತರಿಸಲಾಗುವುದು ಎಂದು ವಿವರಿಸಿದೆ.

ಸಸ್ಯಹಾರ ಮತ್ತು ಮಾಂಸಹಾರ ಉಪಹಾರ ಲಭ್ಯವಿದೆ. ಸಸ್ಯಹಾರಿಗಳಿಗೆ ಎರಡು ಪೀಸ್ ವೆಜ್ ಕಟ್ಲೇಟ್(combo), ಉತ್ತಪ್ಪ, ಫೋಹಾ(ಮಹಾರಾಷ್ಟ್ರ ಶೈಲಿಯ ಅವಲಕ್ಕಿ, ಈರುಳ್ಳಿ ಮಿಶ್ರಣದ ತಿಂಡಿ), ಸೇವಿಗೆ ಮತ್ತು ಕಾಯಿ ಚಟ್ನಿ.

ಮತ್ತೊಂದು ಕಾಂಬೋದಲ್ಲಿ ಎರಡು ಪೀಸ್ ಮೆದು ವಡಾ, ರವೆ ಉಪ್ಪಿಟ್ಟು, ತೆಂಗಿನ ಕಾಯಿ ಚಟ್ನಿ. ಮಾಂಸಹಾರಿಗಳಿಗೆ ಮಸಾಲಾ ಆಮ್ಲೇಟ್ಸ್ ಮತ್ತು ಎಣ್ಣೆಯಲ್ಲಿ ಹುರಿದ ತರಕಾರಿ ನೀಡಲಾಗುತ್ತದೆ. ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರು ಹೆಚ್ಚುವರಿಯಾಗಿ ಸಕ್ಕರೆ ಮತ್ತು ಹಾಲಿಗೆ ಬೇಡಿಕೆ ಸಲ್ಲಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next