ನವದೆಹಲಿ:ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಜಾರಿಗೊಳಿಸಿದ್ದ ಲಾಕ್ ಡೌನ್ ನಿರ್ಬಂಧವನ್ನು ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಸಡಿಲಿಕೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಸೋಮವಾರದಿಂದ ಕೆಲವು ಷರತ್ತುಗಳೊಂದಿಗೆ ಮದ್ಯಮಾರಾಟಕ್ಕೆ ಅವಕಾಶ ನೀಡಲಾಗಿತ್ತು.
ದೆಹಲಿಯಲ್ಲಿ ಮದ್ಯ ಖರೀದಿಗಾಗಿ ನೂರಾರು ಜನರು ಮುಗಿಬಿದ್ದ ಪರಿಣಾಮ ಜನರನ್ನು ನಿಯಂತ್ರಿಸಲು ಮದ್ಯದ ಅಂಗಡಿ ಮಾಲೀಕರು ಪೊಲೀಸರಿಗೆ ಕರೆ ಮಾಡಿ ಜನರನ್ನು ನಿಯಂತ್ರಿಸುತ್ತಿರುವ ಘಟನೆ ನಡೆದಿದೆ. ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಜನರು ಮದ್ಯ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಎಲ್ಲೆಡೆ ಹರಿದಾಡತೊಡಗಿದೆ.
ದೆಹಲಿಯ ಸೋಂಕಿತ ಪ್ರದೇಶದ ಹೊರವಲಯದಲ್ಲಿ ಸುಮಾರು 150 ಮದ್ಯದ ಅಂಗಡಿಗಳಿಗೆ ಮದ್ಯ ಮಾರಾಟ ಮಾಡಲು ಸರ್ಕಾರ ಅವಕಾಶ ನೀಡಿತ್ತು. ಆದರೆ ಈ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸೂಚಿಸಲಾಗಿತ್ತು. ಮದ್ಯ ಖರೀದಿ ವೇಳೆ ಹಲವೆಡೆ ಎಲ್ಲಾ ನಿರ್ಬಂಧಗಳನ್ನು ಗಾಳಿಗೆ ತೂರಿ ಮದ್ಯ ಖರೀದಿಸಿರುವ ಘಟನೆ ನಡೆದಿದೆ ಎಂದು ವರದಿ ವಿವರಿಸಿದೆ.
ಮುಂಬೈನಲ್ಲಿ ತೆರೆಯದ ಮದ್ಯದ ಅಂಗಡಿ:
ಕೋವಿಡ್ 19 ವೈರಸ್ ನಿಂದ ತತ್ತರಿಸಿರುವ ಮಹಾರಾಷ್ಟ್ರ ಜಿಲ್ಲೆಯ ಮುಂಬೈನಲ್ಲಿ ಸೋಮವಾರದಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿಲ್ಲ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಇಂದು ಮಧ್ಯಾಹ್ನ 12ಗಂಟೆಗೆ ನಗರದ ಎಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮೇ 17ರವರೆಗೆ ಲಾಕ್ ಡೌನ್ ಮುಂದುವರಿಯಲಿದ್ದು ಮಾಲ್ ಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.